01.ಇಂದು ಎಸ್​​ಎಸ್​ಎಲ್​ಸಿ ಪರೀಕ್ಷೆ

ಸಾಂದರ್ಭಿಕ ಚಿತ್ರ

ಕೋವಿಡ್‌ ಹಿನ್ನೆಲೆ ಹಲವು ಬಾರಿ ಮುಂದೂಡಲ್ಪಟ್ಟಿದ್ದ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ಒಟ್ಟು 8 ಲಕ್ಷದ 76 ಸಾವಿರದ 581 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ಈ ಬಾರಿ ಪರೀಕ್ಷಾ ಕೇಂದ್ರಗಳನ್ನ ದುಪ್ಪಟ್ಟುಗೊಳಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ಲಕ್ಷಣಗಳು ಕಂಡು ಬಂದರೆ ಅಂತವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

​02. ಥಿಯೇಟರ್​ಗಳ ಓಪನ್​ಗೆ ಅಸ್ತು

ಇಂದಿನಿಂದ ರಾಜ್ಯದಲ್ಲಿ ನಾಲ್ಕನೇ ಹಂತದ ಅನ್​ಲಾಕ್ ಜಾರಿಯಾಗಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲಾಗಿದೆ. ಅದರನ್ವಯ ಜುಲೈ 26ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕಾದ್ರೆ ವ್ಯಾಕ್ಸಿನ್ ಪಡೆದಿರಬೇಕು ಅನ್ನೋ ನಿಬಂಧನೆ ವಿಧಿಸಲಾಗಿದೆ. ಸಿನಿಮಾ ಥಿಯೇಟರ್ಸ್​ ಮತ್ತು ರಂಗ ಮಂದಿರಗಳ ಆರಂಭಕ್ಕೂ ಸರ್ಕಾರ ಹಸಿರು ನಿಶಾನೆ ತೋರಿದೆ. ಶೇಕಡಾ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇನ್ನು ನೈಟ್​ ಕರ್ಫ್ಯೂ ಅವಧಿಯಲ್ಲೂ ಸರ್ಕಾರ ಬದಲಾವಣೆ ಮಾಡಿದ್ದು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವೆರೆಗೆ ನೈಟ್​ಕರ್ಫ್ಯೂ ಅವಧಿ ಸೀಮಿತಗೊಳಿಸಲಾಗಿದೆ.

03. ‘ಆಡಿಯೋ’ ಬಾಂಬ್.. ಕಮಲದೊಳಗೆ ಗಲಿಬಿಲಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ರಾಜ್ಯ ಕಮಲಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಆಡಿಯೋದಲ್ಲಿ ಜಗದೀಶ್​ ಶೆಟ್ಟರ್​ ಹಾಗೂ ಕೆ.ಎಸ್ ಈಶ್ವರಪ್ಪ ಟೀಮ್​​ಗೆ ಕೊಕ್ ಸಿಗಲಿದೆ ಅನ್ನೋ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಾಯಕರ ಬದಲಾಗಿ ಹೊಸ ಟೀಮ್​ ಮಾಡ್ತಿದ್ದೀವಿ. ಮೂವರ ಹೆಸರು ಚರ್ಚೆಯಲ್ಲಿದೆ ಅಂತಲೂ ಆಡಿಯೋದಲ್ಲಿ ಹೇಳಲಾಗಿದೆ. ಆದ್ರೆ ಈ ಆಡಿಯೋ ನನ್ನದಲ್ಲ ಎಂದಿರೋ ಕಟೀಲ್, ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

04. ಇಂದಿನಿಂದ ‘ಮುಂಗಾರು’ ಮಹಾಯುದ್ಧ

ಕೊರೊನಾ ಸೋಂಕಿನ ಆತಂಕದ ನಡುವೆಯೇ ಇಂದಿನಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಈ ಬಾರಿಯ ಅಧಿವೇಶನದಲ್ಲಿ ಈಗಿರುವ ಮಸೂದೆಗಳಿಗೆ ಅಂಗೀಕಾರ ಪಡೆಯೋದ್ರ ಜೊತೆಗೆ ಇನ್ನೂ 17 ಮಸೂದೆಗಳನ್ನ ಮಂಡಸಿ ಅನುಮೋದನೆ ಪಡಿಯೋಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರತಿಪಕ್ಷಗಳೂ ಕೂಡ ತಮ್ಮ ಅಸ್ತ್ರವನ್ನ ಅಧಿವೇಶನದಲ್ಲಿ ಪ್ರಯೋಗಿಸೋದಕ್ಕೆ ಸಜ್ಜಾಗಿವೆ. ಕೋವಿಡ್​ ನಿರ್ವಹಣೆ, ಲಸಿಕೆ ಸಮಸ್ಯೆ, ತೈಲ ಬೆಲೆ ಏರಿಕೆ, ಕೃಷಿ ಕಾಯಿದೆ ಬಗ್ಗೆ ಪ್ರಸ್ತಾಪಿಸಲು ಪ್ಲಾನ್ ಮಾಡಿವೆ.

05.ಅಧಿವೇಶನಕ್ಕೆ ತಟ್ಟಲಿದೆ ಕೃಷಿ ಕಿಚ್ಚು

ಅಧಿವೇಶನ ನಡೆಯೋ ಸಮಯದಲ್ಲಿ ರೈತ ಸಂಘಟನೆಗಳು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇಂದಿನಿಂದ ಅಧಿವೇಶನ ಮುಗಿಯೋವರೆಗೆ ಅಂದ್ರೆ ಆಗಸ್ಟ್ 13ರವರೆಗೆ ಪ್ರತಿದಿನವೂ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಲು ರೈತರ ಮುಖಂಡರು ಮುಂದಾಗಿದ್ದಾರೆ.ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಧರಣಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಮೊದಲನೇ ದಿನದಿಂದಲೇ ಕಲಾಪ ಕಾವೇರುವ ಎಲ್ಲಾ ಸಾಧ್ಯತೆಗಳೂ ಇವೆ.

06. ಪೊಲಿಟಿಕಲ್​ ಫೀಲ್ಡ್​ನಲ್ಲಿ ಸಿಧು ಸಿಕ್ಸರ್

ಪಂಜಾಬ್ ಸಿಎಂ ಅಮರಿಂದರ್​ ಸಿಂಗ್ ವಿರೋಧದ ನಡುವೆಯೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಿಸಲಾಗಿದೆ. ನವಜೋತ್ ಸಿಧು ಮತ್ತು ಮುಖ್ಯಮಂತ್ರಿ ಅಮರಿಂದರ್​ ಸಿಂಗ್ ಅವರೊಂಂದಿಗೆ ಕಾಂಗ್ರೆಸ್​ ಹೈಕಮಾಂಡ್ ಸರಣಿ ಸಭೆ ನಡೆಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ. ಈ ವೇಳೆ ನಾಲ್ವರು ಕಾರ್ಯಾಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಇದು ಅಮರಿಂದರ್​ ಸಿಂಗ್​ರಿಗೆ ಆದ ಹಿನ್ನಡೆ ಅಂತಲೂ ಬಿಂಬಿಸಲಾಗ್ತಿದೆ.

07. ‘ಮಾಸ್ಕ್ ಬಳಕೆ ನಿಲ್ಲಿಸೋದಕ್ಕೆ ಒಳ್ಳೆಯದಲ್ಲ’

ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ತೆಗೆದುಹಾಕುವತ್ತ ಹಲವಾರು ದೇಶಗಳು ಮುಂದಾಗುತ್ತಿವೆ. ಆದ್ರೆ ಕೊರೊನಾ ಹರಡುವುದನ್ನು ತಡೆಯಲು ಜನರು ಮಾಸ್ಕ್​ ಧರಿಸುವುದನ್ನು ಮುಂದುವರಿಸಬೇಕೆಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ ಧರಿಸುವುದನ್ನು ಮುಂದುವರೆಸಬೇಕು, ರೆಸ್ಟೋರೆಂಟ್‌ಗಳು, ಪಬ್‌ಗಳು, ಚಿತ್ರಮಂದಿರಗಳು ಮತ್ತು ಒಳಾಂಗಣ ಕೂಟಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಬೇಕು. ಮಾಸ್ಕ್​ ಧರಿಸೋದ್ರಿಂದ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಲಿದೆ ಅಂತಾ ಬ್ರಿಟನ್​ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

08. ಹಣವೂ ಕದ್ದು, ಕೀಟಲೆ ಕೊಟ್ಟ ಕಳ್ಳಿ

ಅಮೆರಿಕಾದ ನೆವಡಾದ ಪೊಲೀಸ್ರು ಒಂದು ವಿಚಿತ್ರ ಕೇಸ್​ ಪತ್ತೆ ಮಾಡಿದ್ದಾರೆ. 42 ವರ್ಷದ​ ಮಹಿಳೆ ದಂತ ವೈದ್ಯಕೀಯ ಆಸ್ಪತ್ರೆಗೆ ನುಗ್ಗಿ ಹಣ ಕದ್ದಿದ್ದಾಳೆ ಅಲ್ಲದೇ ವಾಪಸ್ಸಾಗುವಾಗ ಅಲ್ಲಿದ್ದ ಪೇಶೆಂಟ್​ ಒಬ್ಬರ 13 ಹಲ್ಲುಗಳನ್ನ ಎಳೆದಾಡಿ ಕಿತ್ತಿದ್ದಾಳೆ. ಘಟನೆ ಗೊತ್ತಾಗುತ್ತಿದ್ದಂತೆ ಆರೋಪಿ ಮಹಿಳೆಯನ್ನ ಪೊಲೀಸ್ರು ಪತ್ತೆ ಮಾಡಿ ಬಂಧಿಸಿದ್ದಾರೆ. ಇನ್ನು ಈ ಮಹಿಳೆ ಮುಂಚೆ ಇದೇ ದಂತ ವೈದ್ಯಕೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಅಂತಲೂ ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಯ ಆಟಾಟೋಪಕ್ಕೆ ಕಾರಣ ಅನ್ನೋದನ್ನ ಪೊಲೀಸರು ಬಾಯ್ಬಿಡಿಸ್ತಿದ್ದಾರೆ.

09. ವೃದ್ಧ ದಂಪತಿಯ ನಿಸ್ವಾರ್ಥ ಸೇವೆ

ಕಳೆದ 11 ವರ್ಷಗಳಿಂದ ಹೈದರಾಬಾದ್​ನಲ್ಲಿ ಹಿರಿಯ ಜೀವಿಗಳು ರಸ್ತೆ ಸುರಕ್ಷತೆಗೆ ಮುಂದಾಗಿದ್ದಾರೆ. 73 ವರ್ಷದ ನಿವೃತ್ತ ರೈಲ್ವೆ ಎಂಜನೀಯರ್ ಗಂಗಾಧರ್ ತಿಲಕ್​ ಕಟ್ನಮ್​ ಹಾಗೂ 64 ವರ್ಷದ ವೆಂಕಟೇಶ್ವರಿ ಕಟ್ನಮ್​ ದಂಪತಿ ಇಂತದ್ದೊಂದು ಸಮಾಜ ಪರ ಕೆಲಸಕ್ಕೆ ಮುಂದಾಗಿದ್ದಾರೆ. ರಸ್ತೆಗಳು ಎಲ್ಲೆಲ್ಲಿ ಹದಗೆಟ್ಟಿರುತ್ತವೆಯೋ ಅವುಗಳನ್ನ ಸರಿಪಡಿಸೋ ಕಾರ್ಯಕ್ಕೆ ಈ ದಂಪತಿ ಮುಂದಾಗ್ತಾರೆ. ರಸ್ತೆಗಳಲ್ಲಿ ತಗ್ಗುಗಳಿದ್ದರೆ, ಡಾಂಬರು, ಸಿಮೆಂಟ್​ ಕಿತ್ತಿದ್ದರೆ, ಆಳ ಗುಂಡಿಗಳಿದ್ದರೆ ಅವುಗಳನ್ನ ಮುಚ್ಚಿ ರಸ್ತೆ ದುರಸ್ತಿ ಕೈಗೊಳ್ಳುತ್ತಾರೆ. ಅದರಂತೆ ಈವರೆಗೂ ಸುಮಾರು ಎರಡು ಸಾವಿರ ರಸ್ತೆಗುಂಡಿಗಳನ್ನ ಈ ದಂಪತಿ ಮುಚ್ಚಿದ್ದಾರೆ.

10. ಜಯದ ಶಿಕಾರಿಯಾಡಿದ ಶಿಖರ್​ ಬಳಗ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳಿಂದ ಜಯ ಸಾಧಿಸಿದೆ. ಕೊಲಂಬೋದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ 50 ಓವರ್​ ಗಳ ಏಕ ದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸುವ ಮೂಲಕ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಶ್ರೀಲಂಕಾ ನೀಡಿದ ನೀಡಿದ ಗುರಿ ಬೆನ್ನಟ್ಟಿದ ಭಾರತ ತಂಡ 36.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸುವ ಮೂಲಕ ಗುರಿ ತಲುಪಿ ಜಯ ಸಾಧಿಸಿದೆ.

The post ಹಣವೂ ಕದ್ದು, ಕೀಟಲೆ ಕೊಟ್ಟ ಕಳ್ಳಿ- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link