ಚಾಮರಾಜನಗರ: ಟ್ಯಾಕ್ಸಿ ಚಾಲಕರೊಬ್ಬರು ಒಂದೊಳ್ಳೆ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡಿಕೊಂಡಿರೋ ಮನು ಎಂಬವರು, ಕ್ಯಾನ್ಸರ್‌ಗೆ ತುತ್ತಾಗಿದ್ದ ಮಗುವನ್ನು ಸುರಕ್ಷಿತವಾಗಿ ಚಾಮರಾಜನಗರದ ಮನೆ ಬಾಗಿಲಿಗೆ ತಲುಪಿಸಿದ್ದಲ್ಲದೇ, ತಮ್ಮ ಸೇವೆಗೆ ಹಣ ಪಡೆಯದೇ ಮಾನವೀಯತೆ ಮೆರೆದಿದ್ದಾರೆ.

ಚಾಮರಾಜನಗರ ಜಿಲ್ಲೆ, ಯಳಂದೂರು ತಾಲೂಕು ಮದ್ದೂರು ಗ್ರಾಮದ ರವಿಕುಮಾರ್ ಮತ್ತು ಸುಧಾ ದಂಪತಿಯ ಪುತ್ರಿ ಸೃಷ್ಟಿ(12) ಮೆದುಳಿನ‌ ಕ್ಯಾನ್ಸರ್​​ನಿಂದ ಬಳಲುತ್ತಿದ್ದಾಳೆ. ಆಕೆಯನ್ನ ಎರಡು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ‌ ಕೆ.ಆರ್.ಆಸ್ಪತ್ರೆಯಿಂದ ಬೆಂಗಳೂರಿನ ನಿಮ್ಹಾನ್ಸ್​​ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ನಿಮ್ಹಾನ್ಸ್​ನಿಂದ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿತ್ತು. ಆದ್ರೆ ವೀಕೆಂಡ್ ಆಗಿರೋ ಕಾರಣ ಸೋಮವಾರದಂದು ಬರಲು ಅಲ್ಲಿನ ವೈದ್ಯರು ತಿಳಿಸಿದ್ದರಂತೆ.

ಹೀಗಾಗಿ ಬೆಂಗಳೂರಿನಿಂದ ಚಾಮರಾಜನಗರಕ್ಕೆ ವಾಪಸ್ ಬರಲು ದಂಪತಿ ನಿರ್ಧರಿಸಿದ್ರು. ಆದ್ರೆ ಲಾಕ್​ಡೌನ್​ ಇದ್ದ ಕಾರಣದಿಂದ ಬೆಂಗಳೂರಿನಲ್ಲಿ ವಾಹನಗಳು ಸಿಗದೆ ದಂಪತಿ ಪರದಾಡಿದ್ದರು. ಈ ವೇಳೆ ತಕ್ಷಣ ದಂಪತಿಯ ಕಷ್ಟಕ್ಕೆ ಸ್ಪಂದಿಸಿದ ಟ್ಯಾಕ್ಸಿ ಚಾಲಕ ಮನು, ಮಗು ಹಾಗೂ ಪೋಷಕರನ್ನ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಕರೆದೊಯ್ದು. ಬಳಿಕ ಟ್ಯಾಕ್ಸಿ ಚಾಲಕನಿಗೆ ಬಾಡಿಗೆ ನೀಡಲು ದಂಪತಿ ಪರದಾಡುತ್ತಿದ್ದುದನ್ನ ಕಂಡ ಮನು, ಬಾಡಿಗೆ ಪಡೆಯಲು ನಿರಾಕರಿಸಿದ್ದಾರೆ.

ಮನು ಅವರ ಉದಾರತೆಯನ್ನ ಮೆಚ್ಚಿದ ಗ್ರಾಮಸ್ಥರು ಅವರಿಗೆ ಸನ್ಮಾನ ಮಾಡಿದ್ದಾರೆ.  ಅಂದ್ಹಾಗೆ ಮನು ಮೂಲತಃ ಕೊಳ್ಳೇಗಾಲದ ಮುಳ್ಳೂರು ಗ್ರಾಮದವರು ಅಂತ ತಿಳಿದುಬಂದಿದೆ.

The post ಹಣ ಪಡೆಯದೇ, ಕ್ಯಾನ್ಸರ್​ಪೀಡಿತ ಮಗುವನ್ನು ಬೆಂಗಳೂರಿಂದ ಚಾಮರಾಜನಗರದಕ್ಕೆ ತಲುಪಿಸಿದ ಟ್ಯಾಕ್ಸಿ ಚಾಲಕ appeared first on News First Kannada.

Source: newsfirstlive.com

Source link