ಕಲಬುರಗಿ: ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಓಝಾ ಲೇಔಟ್ ನಲ್ಲಿ ನಡೆದಿದೆ.
ಆರತಿ ರಾಠೋಡ್ (28) ಕೊಲೆಯಾದ ಗೃಹಣಿಯಾಗಿದ್ದು, ಪತಿ ತಾರಾಸಿಂಗ್ ರಾಠೋಡ್ ಪತ್ನಿಯನ್ನು ಕೊಲೆಗೈದ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಆರತಿ ಹಾಗೂ ತಾರಾಸಿಂಗ್ ರಾಠೋಡ್ಗೆ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿ ನಡುವೆ ಪದೇ ಪದೆ ತವರು ಮನೆಗೆ ಹೋಗುವ ವಿಚಾರಕ್ಕೆ ಗಲಾಟೆ ನಡೆಯುತ್ತಿತಂತೆ. ಈ ನಡುವೆ ನಿನ್ನೆ ಸಂಕ್ರಾಂತಿ ಹಬ್ಬಕ್ಕೆ ತವರು ಮನೆಗೆ ಹೋಗ್ತಿನಿ ಅಂತಾ ಕೇಳಿದ್ದಳಂತೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಪತಿ, ಗ್ಯಾಸ್ ಸಿಲಿಂಡರ್ ಎತ್ತಿ ಹಾಕಿ ನಡುರಾತ್ರಿ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಅಂದ ಹಾಗೇ ಆರೋಪಿ ತಾರಾಸಿಂಗ್ ಕಲಬುರಗಿಯ ಖಾಸಗಿ ಶಾಲೆಯ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿಯನ್ನು ಕೊಲೆಗೈದು ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.