ಹಬ್ಬಗಳ ಆಚರಣೆಗೆ ಯಾವ ನಿರ್ಬಂಧಗಳೂ ಇಲ್ಲ, ಅದರೆ ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು: ಡಾ ಸುಧಾಕರ್ | No restrictions on festivities but people must follow Covid appropriate behavior: Dr Sudhakar ARB


ಬೆಂಗಳೂರು: ಕೋವಿಡ್-19 ಮೂರನೇ ಅಲೆ (third wave) ಹೆಚ್ಚಿನ ತೊಂದರೆಯನ್ನೇನೂ ಉಂಟುಮಾಡಲಿಲ್ಲ ಅಂತ ನಿರಾಳರಾಗಿದ್ದ ಅರೂವರೆ ಕೋಟಿ ಕನ್ನಡಿಗರಿಗೆ ನಾಲ್ಕನೇ ಅಲೆಯ (fourth wave) ಭೀತಿ ಧುತ್ತನೆ ಎದುರಾಗಿದೆ. ಹಿಂದಿನ ಮೂರು ಅಲೆಗಳೊಂದಿಗೆ ಏಗಿದ ಅನುಭವ ಹೊಂದಿರುವ ರಾಜ್ಯ ಸರ್ಕಾರ 4 ನೇ ಅಲೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು ಜನರ ವರ್ತನೆ ಯಾವ ರೀತಿಯಾಗಿರಬೇಕು ಅಂತ ವಿವರಿಸುವ ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಿದೆ. ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಆರ್ ಸುಧಾಕರ್ ಅವರೊಂದಿಗೆ ಟಿವಿ9 ಕನ್ನಡ ಚ್ಯಾನೆಲ್ ವರದಿಗಾರ ಮಾತಾಡಿದರು. ಜನ ಯಾವ ಕಾರಣಕ್ಕೂ ಯಾಮಾರಬಾರದು, ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಅನ್ನೋದು ಸಚಿವರು ಆಡಿದ ಮಾತುಗಳ ಪ್ರಮುಖ ಅಂಶವಾಗಿತ್ತು.

ಮೂರನೇ ಅಲೆಯಿಂದ ಹೆಚ್ಚಿನ ಅನಾಹುತ ಸಂಭವಿಸದ ಕಾರಣ ಜನ ಲಸಿಕೆ ಹಾಕಿಸಿಕೊಳ್ಳುವುದನ್ನು ಮರೆತು ಬಿಟ್ಟಿದ್ದಾರೆ. ಕೋವಿಡ್-19 ಪ್ರಪಂಚದಿಂದ ನಿರ್ನಾಮ ಆಗಿದೆ ಅಂತ ತಿಳಿದುಕೊಂಡಿದ್ದಾರೆ. ಬಹಳಷ್ಟು ಜನರು ಎರಡನೇ ಡೋಸ್ ತೆಗೆದುಕೊಳ್ಳಬೇಕಿದೆ. ಎರಡು ಡೋಸ್ ತೆಗೆದುಕೊಂಡಿರುವವರು ಬೂಸ್ಟರ್ ಡೋಸ್ ಕೂಡ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

ಬೆಂಗಳೂರು ನಗರ ಎಲ್ಲದಕ್ಕೂ ಎಪಿಸೆಂಟರ್ ಆಗಿದೆ. ಬೇರೆ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜನರ ಮೇಲೆ ವಿಶೇಷ ನಿಗಾ ಇಡಲಾಗಿದೆ. ಟೆಲಿಮಾನಿಟರಿಂಗ್ ಮೂಲಕ ಅವರ ಜೊತೆ ಸಂಪರ್ಕದಲ್ಲಿರುವ ವ್ಯವಸ್ಥೆ ಮಾಡಲಾಗಿದೆ. ರೋಗ ಲಕ್ಷಣಗಳೇ ಏನಾದರೂ ಕಂಡುಬಂದರೆ ತಡಮಾಡದೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾ ಅರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಯಾ ಜಿಲ್ಲೆಗಳಲ್ಲಿ ಯಾವ್ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಂತ ಚರ್ಚಿಸಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು. ಸರ್ಕಾರ ಎಷ್ಟೇ ಜಾಗ್ರತೆ ವಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದರೂ ಜನರ ಸಹಕಾರ ಇಲ್ಲದೇ ಹೋದರೆ ನಿಷ್ಫಲವಾಗುತ್ತದೆ ಅಂತ ಅವರು ಹೇಳಿದರು.

ಹಬ್ಬಗಳ (ರಂಜಾನ್) ಆಚರಣೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಆದರೆ ಎಲ್ಲ ಸಮುದಾಯಗಳ ಜನರು ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಗಳಿಂದ ಕೈ ತೊಳೆದುಕೊಳ್ಳುವುದನ್ನು ಮಾಡುತ್ತಿರಬೇಕು ಎಂದು ಸಚಿವ ಆ ಸುಧಾಕರ್ ಹೇಳಿದರು.

TV9 Kannada


Leave a Reply

Your email address will not be published. Required fields are marked *