ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ (Tricolour Flag) ವನ್ನು ಹಾರಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ. ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದರು. ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ.