ಬೆಂಗಳೂರು: ಫ್ಲಾಗ್‍ಶಿಪ್‍ ಸ್ಮಾರ್ಟ್ ಫೋನ್‍ ಗಳ ಪ್ರಸಿದ್ಧ ಬ್ರಾಂಡ್‍ ಒನ್ ಪ್ಲಸ್ ತನ್ನ ಮೊದಲ ಸ್ಮಾರ್ಟ್‍ ವಾಚನ್ನು ಭಾರತದಲ್ಲಿ ಇದೀಗ ಬಿಡುಗಡೆ ಮಾಡಿದೆ. ಒನ್‍ ಪ್ಲಸ್‍ ನ ಧ್ಯೇಯ ವಾಕ್ಯವಾಗಿರುವ “ನೆವರ್‍ ಸೆಟ್ಲ್’ ತನ್ನ ವೇರೇಬಲ್‍ ಸಾಧನಗಳಿಗೂ ಅನ್ವಯಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

ಒನ್ ಪ್ಲಸ್ ವಾಚ್ ಕಂಪನಿಯ ಇತ್ತೀಚಿನ ವಿಸ್ತರಣೆಯಾಗಿದೆ. ಒನ್ ಪ್ಲಸ್ ದೀರ್ಘಕಾಲದಿಂದ ಸ್ಮಾರ್ಟ್ ಫೋನ್ ಗಳ ಉತ್ಪಾದನೆ ಮೇಲೆ ಗಮನಹರಿಸಿತ್ತು. ಒನ್ ಪ್ಲಸ್ ವಾಚ್ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲಿದೆ ಎಂದು ಒನ್ ಪ್ಲಸ್‍ ಸಂಸ್ಥಾಪಕ ಮತ್ತು ಸಿಇಒ ಪೀಟ್ ಲಾವ್‍ ತಿಳಿಸಿದರು.

ಇದನ್ನೂ ಓದಿ:ಶೀಫ್ರದಲ್ಲೇ ಬಿಡುಗಡೆಗೊಳ್ಳಲಿದೆ 7 ಆಸನಗಳುಳ್ಳ ಮಹಿಂದ್ರಾ ಎಕ್ಸ್‌ಯುವಿ 700

1.39 ಇಂಚಿನ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. 454*454 ಪಿಕ್ಸಲ್ ರೆಸೂಲೇಷನ್.  ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಇದೆ. ಇದರಲ್ಲಿ ರಕ್ತದ ಆಮ್ಲಜನಕ ಮಟ್ಟ, ಹೃದಯ ಬಡಿತ, ನಿದ್ದೆಯ ಪ್ರಮಾಣ ಇತ್ಯಾದಿಗಳ ಪ್ರಮಾಣ ನೋಡುವಿಕೆ ಮಾತ್ರವಲ್ಲ 110 ರೀತಿಯ ವರ್ಕೌಟ್‌ಗಳ ಕ್ಯಾಲರಿ ಕಡಿತದ ಮಾನಕಗಳನ್ನು ನೋಡಬಹುದು.  ಇದರ ಮೂಲಕ ಒನ್‌ಪ್ಲಸ್ ಟಿವಿ, ಒನ್‌ಪ್ಲಸ್ ಇಯರ್‌ಬಡ್‌ಗಳನ್ನು ನಿಯಂತ್ರಿಸಬಹುದು. ಒನ್‌ಪ್ಲಸ್ ಟಿವಿಗೆ ರಿಮೋಟ್ ಆಗಿಯೂ ಬಳಸಬಹುದು.

ತಡೆ ರಹಿತ ಸಂಪರ್ಕ

ಒನ್ ಪ್ಲಸ್ ವಾಚ್ ನಲ್ಲಿ ಫೋನಿನ ನೋಟಿಫಿಕೇಶನ್ ಗಳನ್ನು ನೋಡಬಹುದು ಮತ್ತು ಅವುಗಳ ನಿರ್ವಹಣೆ ಮಾಡಬಹುದು. ಕರೆಗಳಿಗೆ ಉತ್ತರಿಸಬಹುದು ಮತ್ತು ಕರೆಗಳನ್ನೂ ಮಾಡಬಹುದು. ಅದರ ಮೂಲಕ ಮ್ಯೂಸಿಕ್‍ ಪ್ಲೆ ಮಾಡಬಹುದು. 4 ಜಿಬಿ ಆಂತರಿಕ ಸಂಗ್ರಹ. ಅಂತರ್ನಿರ್ಮಿತ ಜಿಪಿಎಸ್ ಮತ್ತು ಬ್ಲೂಟೂತ್ ಇಯರ್ ಫೋನ್ ಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಒನ್ ಪ್ಲಸ್ ವಾಚು, ಒನ್ ಪ್ಲಸ್ ಟಿವಿಗೆ ಪೇರ್ ಆಗಲಿದ್ದು, ಇದು ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಆಗಿ ಕೆಲಸ ಮಾಡುತ್ತದೆ. ಇದರ ಮೂಲಕ ಒಳ ಬರುವ ಕರೆಯ ವೇಳೆ ಟಿವಿ ವಾಲ್ಯೂಂ ಅನ್ನು ಕಡಿಮೆ ಮಾಡಬಹುದು ಅಥವಾ ನಿಯಂತ್ರಿಸಬಹುದು. ನಿದ್ದೆಗೆ ಜಾರುವ ವೇಳೆ ಇದರ ಮೂಲಕವೇ ಟಿವಿಯನ್ನು ಆಫ್ ಮಾಡಬಹುದು.

ಇದನ್ನೂ ಓದಿ: 2020-21ರ ಆರ್ಥಿಕ ವರ್ಷದ ಅತಿ ಹೆಚ್ಚು ಕಾರುಗಳ ಮಾರಾಟ : ಮಾರುತಿ ಸುಜುಕಿ ಮೇಲುಗೈ

ಶಕ್ತಿಶಾಲಿ ಬ್ಯಾಟರಿ

ಒನ್ ಪ್ಲಸ್ ವಾಚ್ ನ ವಿಶೇಷವೆಂದರೆ ಕೇವಲ ಐದು ನಿಮಿಷ ಚಾರ್ಜ್ ಮಾಡಿದರೆ ಸಾಕು ಇಡೀ ಒಂದು ದಿನ ಬಾಳಿಕೆ ಬರುತ್ತದೆ. ಇಷ್ಟೇ ಅಲ್ಲ, ಕೇವಲ 20 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಒಂದು ವಾರದವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಇದರಲ್ಲಿರುವ 402 ಎಂಎಎಚ್ ಬ್ಯಾಟರಿಯನ್ನು ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಎರಡು ವಾರಗಳ ಕಾಲ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.

ನೀರು ನಿರೋಧಕ

5 ಎಟಿಎಂ ಮತ್ತು ಐಪಿ68 ನೀರು ಮತ್ತು ಧೂಳು ನಿರೋಧಕದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದರಲ್ಲಿ 110+ ವರ್ಕೌಟ್ ಮಾದರಿಗಳು ಇವೆ. ನಾಡಿಮಿಡಿತ, ದೂರ, ಕ್ಯಾಲೊರಿಗಳು, ಇದರಲ್ಲಿನ ಅಂತರ್ನಿರ್ಮಿತ ಜಿಪಿಎಸ್ ನೊಂದಿಗೆ ಫೋನ್ ನಿಮ್ಮ ಪಕ್ಕದಲ್ಲಿ ಇಲ್ಲದಿದ್ದರೂ ಸಹ ಒನ್ ಪ್ಲಸ್ ವಾಚ್ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಈ ವಾಚ್‍ನ ದರ 14,999 ರೂ. ಕಪ್ಪು ಮತ್ತು ಬೆಳ್ಳಿ ಬಣ್ಣದಲ್ಲಿ ಲಭ್ಯ.  ಒನ್ ಪ್ಲಸ್.ಇನ್, ಅಮೆಜಾನ್.ಇನ್, ಫ್ಲಿಪ್ ಕಾರ್ಟ್.ಕಾಂ, ಒನ್ ಪ್ಲಸ್ ಎಕ್ಸ್ ಕ್ಲೂಸಿವ್ ಸ್ಟೋರ್ ಗಳಲ್ಲಿ ಏ. 22ರ ಮಧ್ಯಾಹ್ನ 12 ಗಂಟೆಯಿಂದ ಖರೀದಿಸಬಹುದಾಗಿದೆ. ಏ. 30ರವರೆಗೆ ಎಸ್ ಬಿಐ ಕಾರ್ಡ್ ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ 2000 ರೂ. ಡಿಸ್ಕೌಂಟ್ ಪಡೆಯಬಹುದು.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More