ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಬೇಗ ಆರಂಭವಾಗಿದ್ದು, ಬಿತ್ತನೆ ಕಾರ್ಯಗಳು ಮಾಡಲಾಗುತ್ತಿದೆ. ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇವೆ ಎಂದು ಸಿಎಂ ಬಿ.ಎಸ್​​.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದ 20 ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಇಂದು ಇತರೇ ಸಚಿವರ ಜೊತೆ ಸೇರಿ ಚರ್ಚೆ ಮಾಡಿದ್ದೇನೆ. ಮುಂಗಾರು ಈ ಬಾರಿ ಬೇಗ ಆರಂಭವಾಗಿದ್ದು, ಬಿತ್ತನೆ ಕಾರ್ಯಗಳು ಮಾಡಲಾಗುತ್ತಿದೆ. ಜಿಲ್ಲೆಗಳಲ್ಲಿ ಕೆರೆ ಕಟ್ಟೆಗಳು ಹಾಗೂ ಜಲಾಶಯಗಳು ತುಂಬುವ ಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಕಾರ್ಯ ಕೂಡ ಬಹುತೇಕ ಮುಕ್ತಾಯವಾಗಿದೆ ಎಂದರು.

ಮುಂಬುರ ದಿನಗಳಲ್ಲಿ ಬರುವ ಹೆಚ್ಚು ಮಳೆಯಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಚರ್ಚೆ ಮಾಡಿ ಸಲಹೆ ಕೊಟ್ಟಿದ್ದೇನೆ. ಯಾವ ಹಳ್ಳಿಗಳು ಮುಳುಗುವ ಆತಂಕ ಇದೆಯೋ ಅಂತಹ ಹಳ್ಳಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡೋ ಬಗ್ಗೆಯೂ ಸಲಹೆ ಕೊಟ್ಟಿದ್ದೇನೆ. ಎನ್​​​ಡಿಆರ್​ಎಫ್ ವ್ಯವಸ್ಥೆ, ಅಗತ್ಯವಿರುವ ಕಡೆ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ. ಯಾವುದೇ ಅನಾಹುತ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ಇನ್ನು ಇದಕ್ಕೂ ಮುನ್ನ ಸಿಎಂ ಬಿಎಸ್​​ಯಡಿಯೂರಪ್ಪ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಿದರು. ಸಭೆಯ ಮುಖ್ಯಾಂಶಗಳು ಇಂತಿದೆ.

  1. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ನಡೆಯಿತು.
  2. ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
  3. ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
  4. ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ ತಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನಿಸಲಾಯಿತು.
  5. ಎರಡೂ ರಾಜ್ಯಗಳ ನಡುವೆ ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳಲು ತೀರ್ಮಾನಿಸಲಾಯಿತು.
  6. ದೂಧ್ ಗಂಗಾ ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಆಕಾಂಕ್ಷೆ ನೆರವೇರಲಿದೆ.
  7. ಇದರೊಂದಿಗೆ ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 4 ಟಿಎಂಸಿ ನೀರು ಹಾಗೂ ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಅಷ್ಟೇ ಪ್ರಮಾಣದ ನೀರು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

The post ಹಳ್ಳಿಗಳು ಮುಳುಗಲು ಬಿಡಲ್ಲ.. ಹೆಲಿಕಾಪ್ಟರ್ಸ್​ ರೆಡಿ ಇವೆ- ಸಿಎಂ ಬಿಎಸ್​​ವೈ appeared first on News First Kannada.

Source: newsfirstlive.com

Source link