ಮಂಡ್ಯ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದು, ಜಿಲ್ಲೆಯ ಕೆಆರ್ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚಾರ ನಡೆಸಿ ರೈತರಿಂದ ಮಾಹಿತಿ ಪಡೆದು, ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ, ರೈತರಿಗೆ ಧೈರ್ಯ ತುಂಬಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ಇದೇ ವೇಳೆ ಜಿಲ್ಲೆಯ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗ್ರಾಮಸ್ಥರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಮಳೆಯಿಂದಾಗಿ ಗ್ರಾಮದಲ್ಲಿ 8 ಮನೆಗಳು ನೆಲಕ್ಕುರುಳಿದೆ. ನ.13 ರಂದು ಮನೆ ಬಿದ್ದಿದೆ. ಇನ್ನು ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು ಸುಮ್ಮನೆ ಬಂದು ಹೋಗುತ್ತಾರೆ ಎಂದು ಅಳಲು ತೊಡಿಕೊಂಡರು.
ಈ ವೇಳೆ ಗ್ರಾಮಸ್ಥರನ್ನು ಸಮಾಧಾನ ಮಾಡಲು ಮುಂದಾದ ಸಂಸದರು, ಸರ್ಕಾರದಿಂದ ಪರಿಹಾರ ಬರುತ್ತೆ ಎಂದು ಹೇಳಿದರು. ಆದರೆ ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಮಹಿಳೆಯೊಬ್ಬರು, ಪರಿಹಾರ ಬರೋವರೆಗೂ ಎಲ್ಲಿಗೆ ಹೋಗೋದು..? ನಾವು ಏನು ಮಾಡೋದು ಹೇಳಿ? ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ. ಬಾಡಿಗೆ ಮನೆ ಮಾಡಿಕೊಂಡು ಹೇಗೆ ಜೀವನ ಮಾಡೋದು ಎಂದು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಮಹಿಳೆಯ ಆಕ್ರೋಶ ಭರಿತ ಮಾತಿಗೆ ಸಂಸದೆ ಕ್ಷಣ ಕಾಲ ತಬ್ಬಿಬ್ಬಾದಂತೆ ಕಂಡು ಬಂದರು. ಬಳಿಕ ಮತ್ತೊಮ್ಮೆ ಅವರ ಜೊತೆ ಚರ್ಚಿಸಿ ಶೀಘ್ರ ಪರಿಹಾರ ಕೊಡಿಸೋ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, ಮಂಡ್ಯ ಜಿಲ್ಲೆಯಲ್ಲಿ ಆದ ಮಳೆ ಹಾನಿ ಕುರಿತು ಸಿಎಂ ಜೊತೆ ವಿವರವಾಗಿ ಚರ್ಚಿಸಿದ್ದೇನೆ. ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಸಿಎಂ ಕೂಡ ವಿಶೇಷ ಅನುದಾನ ನೀಡುವ ಆದೇಶ ಕೊಡ್ತೇನೆ ಎಂದಿದ್ದಾರೆ. ಪರಿಷತ್ ಚುನಾವಣೆಯಿಂದ ಪರಿಹಾರ ಕೆಲಸ ಕಾರ್ಯಗಳು ವಿಳಂಬವಾಗಿದೆ. ಮುಂದಿನ ದಿನದಲ್ಲಿ ಅವರಿಗೆ ಪರಿಹಾರ ಒದಗಿಸುತ್ತೇವೆ ಎಂದರು.