
ಥ್ರೋಬಾಲ್ ಆಟದಲ್ಲಿ ಸಾಧನೆ ಮಾಡಿದ ರೂಪಾ, ಸುಜಾತಾ
ಬಾಲ್ಯದಲ್ಲಿ ಅಂದರೆ ಹೈಸ್ಕೂಲ್ನಲ್ಲಿ ಇವರ ಗ್ರಾಮದ ಶಾಲೆಯಲ್ಲಿ ಸಿದ್ದಲಿಂಗಪ್ಪ ಎಂಬ ಶಿಕ್ಷಕರಿದ್ದರು. ಅವರು ಖೋಖೋ ಕಲಿಸುತ್ತದ್ದರು. ಜೊತೆಗೆ ಥ್ರೋಬಾಲ್ ಕೂಡಾ ಹೇಳಿಕೊಟ್ಟರು.
ದಾವಣಗೆರೆ: ಥ್ರೋಬಾಲ್ (Throw Ball) ಸ್ಪರ್ಧೆಯಲ್ಲಿ ಹಳ್ಳಿಯ ಇಬ್ಬರು ಯುವತಿಯರು ಸಾಧನೆ ಮಾಡಿ, ದೇಶಕ್ಕೆ ಚಿನ್ನದ ಪದಕ (Gold Medal) ತಂದು ಕೊಟ್ಟಿದ್ದಾರೆ. ಇತ್ತೀಚಿಗೆ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಥ್ರೋಬಾಲ್ ಚಾಂಪಿಯನ್ ಶೀಪ್ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದಿದೆ. ಇದರಲ್ಲಿ ದಾವಣಗೆರೆ ಜಿಲ್ಲೆಯ ಇಬ್ಬರು ಯುವತಿಯರು ಪ್ರಮುಖ ಪಾತ್ರ ವಹಿಸಿದ್ದು, ಭಾರತಕ್ಕೆ ಚಿನ್ನ ತರುವಲ್ಲಿ ಯಶಸ್ವಿ ಆಗಿದ್ದಾರೆ. ಒಬ್ಬ ಯುವತಿ ರೂಪಾ ಕೃಷ್ಣಪ್ಪ. ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರು. ತಂದೆ ಕೃಷ್ಣಪ್ಪ, ರೈತ. ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಇರುವ ಕುಟುಂಬದಲ್ಲಿ ರೂಪಾ ಮೂರನೇ ಮಗಳು.
ಬಾಲ್ಯದಲ್ಲಿ ಅಂದರೆ ಹೈಸ್ಕೂಲ್ನಲ್ಲಿ ಇವರ ಗ್ರಾಮದ ಶಾಲೆಯಲ್ಲಿ ಸಿದ್ದಲಿಂಗಪ್ಪ ಎಂಬ ಶಿಕ್ಷಕರಿದ್ದರು. ಅವರು ಖೋಖೋ ಕಲಿಸುತ್ತದ್ದರು. ಜೊತೆಗೆ ಥ್ರೋಬಾಲ್ ಕೂಡಾ ಹೇಳಿಕೊಟ್ಟರು. ಬಳಿಕ ರಾಜ್ಯ ತಂಡಕ್ಕೆ ಆಯ್ಕೆ ಆಗಿ ಪಂಜಾಬ್ ಹಾಗೂ ತಮಿಳುನಾಡಿನ ಥ್ರೋಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು ರೂಪಾ. ಬಿಬಿಎಂ ಓದಿರುವ ರೂಪಾ ಪೊಲೀಸ್ ಅಧಿಕಾರಿ ಆಗಬೇಕು ಎಂದು ಹಟಕ್ಕೆ ಬಿದ್ದು ಈಗಾಗಲೇ ಪಿಎಸ್ಐ ಹುದ್ದೆಗಾಗಿ ಧಾರವಾಡದಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ.
ಇನ್ನೊಬ್ಬರು ಸುಜಾತಾ ಬಸವರಾಜಪ್ಪ. ಸುಜಾತಾ ತಂದೆ ಕೂಡಾ ರೈತ. ಚನ್ನಗಿರಿ ತಾಲೂಕಿನ ಕಗತೂರು ಗ್ರಾಮದ ನಿವಾಸಿ. ಎಂಎ ಬಿಇಡಿ ಓದಿ ಕೆಲ ವರ್ಷ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಇವರು ಸಹ ಧಾರವಾಡದಲ್ಲಿ ಪಿಎಸ್ಐ ಹುದ್ದೆಗಾಗಿ ಕೋಚಿಂಗ್ ಪಡೆಯುತ್ತಿದ್ದಾರೆ. ಇವರ ತಂದೆ ಮಕ್ಕೆಜೋಳ ಬೆಳೆಯುತ್ತಾರೆ.