ಹಾಂಗ್​ಕಾಂಗ್ ಪೆಟ್ ಶಾಪ್ ಸಿಬ್ಬಂದಿಗೆ ಕೊವಿಡ್ ಸೋಂಕು; 2,000 ಪ್ರಾಣಿಗಳನ್ನು ಕೊಲ್ಲಲು ಸರ್ಕಾರದಿಂದ ಆದೇಶ | No cure for pets Hong Kong Government to kill 2000 animals after hamsters get Covid19


ಹಾಂಗ್​ಕಾಂಗ್ ಪೆಟ್ ಶಾಪ್ ಸಿಬ್ಬಂದಿಗೆ ಕೊವಿಡ್ ಸೋಂಕು; 2,000 ಪ್ರಾಣಿಗಳನ್ನು ಕೊಲ್ಲಲು ಸರ್ಕಾರದಿಂದ ಆದೇಶ

ಹಾಮ್​ಸ್ಟರ್​

ಸಾಕುಪ್ರಾಣಿಗಳನ್ನು ಮಾರುವ ಪೆಟ್ ಅಂಗಡಿಯಲ್ಲಿ ಕೊವಿಡ್ ತಪಾಸಣೆ ಮಾಡಲಾಗಿದ್ದು, ಆ ಅಂಗಡಿಯ ಸಿಬ್ಬಂದಿಗೆ ಕೊರೊನಾವೈರಸ್​ ತಗುಲಿರುವುದು ದೃಢಪಟ್ಟಿರುವುದರಿಂದ ಹ್ಯಾಮ್ಸ್ಟರ್​ಗಳು (Hamsters) ಸೇರಿದಂತೆ ಸುಮಾರು 2,000 ಸಣ್ಣ ಪ್ರಾಣಿಗಳನ್ನು ಕೊಲ್ಲುವುದಾಗಿ ಹಾಂಗ್ ಕಾಂಗ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಂಗ್​ಕಾಂಗ್ ಹ್ಯಾಮ್ಸ್ಟರ್‌ಗಳ ಮಾರಾಟ ಮತ್ತು ಸಣ್ಣ ಸಸ್ತನಿಗಳ ಆಮದನ್ನು ಸಹ ನಿಲ್ಲಿಸಲಿದೆ ಎಂದು ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ ಶಾಪ್ ಉದ್ಯೋಗಿಗೆ ಸೋಮವಾರ ಡೆಲ್ಟಾ ರೂಪಾಂತರಿ ದೃಢಪಟ್ಟಿತ್ತು. ಆ ಅಂಗಡಿಯಲ್ಲಿ ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡ ಹಲವಾರು ಹ್ಯಾಮ್‌ಸ್ಟರ್‌ಗಳಿಗೂ ಕೊವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಪ್ರಕಾರ, ಕೊರೊನಾವೈರಸ್ ಅನ್ನು ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರವನ್ನು ವಹಿಸುವುದಿಲ್ಲ. ಆದರೆ, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸೋಂಕು ಹರಡುವಿಕೆಯನ್ನು ಅವರು ತಳ್ಳಿಹಾಕುವುದಿಲ್ಲ ಎಂದು ಹಾಂಗ್ ಕಾಂಗ್ ಅಧಿಕಾರಿಗಳು ಹೇಳಿದ್ದಾರೆ.

“ಅಂಗಡಿಗಾರನು ವಾಸ್ತವವಾಗಿ ಹ್ಯಾಮ್ಸ್ಟರ್‌ಗಳಿಂದ ಕೊರೊನಾ ಸೋಂಕಿಗೆ ಒಳಗಾಗಿರುವ ಸಾಧ್ಯತೆಯನ್ನು ನಾವು ಹೊರಗಿಡಲು ಸಾಧ್ಯವಿಲ್ಲ” ಎಂದು ಆರೋಗ್ಯ ಸಂರಕ್ಷಣಾ ಕೇಂದ್ರದ ನಿಯಂತ್ರಕ ಎಡ್ವಿನ್ ಟ್ಸುಯಿ ಹೇಳಿದ್ದಾರೆ.

“ನೀವು ಹ್ಯಾಮ್ಸ್ಟರ್ ಹೊಂದಿದ್ದರೆ ನಿಮ್ಮ ಹ್ಯಾಮ್ಸ್ಟರ್‌ಗಳನ್ನು ನೀವು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು ಅವುಗಳನ್ನು ಹೊರಗೆ ಬಿಡಬೇಡಿ” ಎಂದು ಇಲಾಖೆಯ ನಿರ್ದೇಶಕ ಲೆಂಗ್ ಸಿಯು-ಫೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. “ಎಲ್ಲಾ ಸಾಕುಪ್ರಾಣಿ ಮಾಲೀಕರು ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಗಮನಿಸಬೇಕು. ನೀವು ಪ್ರಾಣಿಗಳು ಮತ್ತು ಅವುಗಳ ಆಹಾರದೊಂದಿಗೆ ಸಂಪರ್ಕ ಹೊಂದಿದ ನಂತರ ನಿಮ್ಮ ಕೈಗಳನ್ನು ತೊಳೆಯಬೇಕು. ನಿಮ್ಮ ಸಾಕುಪ್ರಾಣಿಗಳನ್ನು ಚುಂಬಿಸಬೇಡಿ” ಎಂದಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 7ರ ನಂತರ ಆ ಅಂಗಡಿಯಿಂದ ಹ್ಯಾಮ್ಸ್ಟರ್ ಖರೀದಿಸಿದ ಗ್ರಾಹಕರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಮತ್ತು ಅವರ ಹ್ಯಾಮ್ಸ್ಟರ್‌ಗಳನ್ನು ಕೆಳಗಿಳಿಸಲು ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಂಗ್ ಕಾಂಗ್‌ನಲ್ಲಿರುವ ಎಲ್ಲಾ ಸಾಕುಪ್ರಾಣಿ ಅಂಗಡಿಗಳು ಹ್ಯಾಮ್ಸ್ಟರ್‌ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಹ್ಯಾಮ್ಸ್ಟರ್‌ಗಳು ಮತ್ತು ಚಿಂಚಿಲ್ಲಾಗಳು ಸೇರಿದಂತೆ ಸುಮಾರು 2,000 ಸಣ್ಣ ಸಸ್ತನಿಗಳನ್ನು ಕೊಲ್ಲಲಾಗುವುದು ಎಂದು ಅವರು ಹೇಳಿದ್ದಾರೆ. ಡಿಸೆಂಬರ್ 22ರಿಂದ ಹಾಂಗ್ ಕಾಂಗ್‌ನಲ್ಲಿ ಹ್ಯಾಮ್ಸ್ಟರ್‌ಗಳನ್ನು ಖರೀದಿಸಿದ ಗ್ರಾಹಕರು ಕಡ್ಡಾಯ ಪರೀಕ್ಷೆಗೆ ಒಳಪಡಬೇಕು. ಅವರ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಎಂದು ಬರುವವರೆಗೂ ಅವರು ಇತರರನ್ನು ಸಂಪರ್ಕಿಸದಂತೆ ಒತ್ತಾಯಿಸಲಾಗುತ್ತದೆ.

TV9 Kannada


Leave a Reply

Your email address will not be published. Required fields are marked *