ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳು ಸದ್ದು ಮಾಡಿದ್ದು, ರೈಲ್ವೆ ನೌಕರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದ ರೈಲ್ವೆ ಶೆಡ್ ಮುಂಭಾಗದಲ್ಲಿ ನಡೆದಿದೆ.
ಹುಬ್ಬಳ್ಳಿ- ಗದಗ ರಸ್ತೆಯಲ್ಲಿರುವ ಲೋಕೋ ಶೆಡ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಚಂದ್ರಶೇಖರ ನಾಯ್ಡು ಎಂಬುವವರಿಗೆ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದುಷ್ಕರ್ಮಿಗಳು ಮೂರ್ನಾಲ್ಕು ಬಾರಿ ಚಂದ್ರಶೇಖರ ನಾಯ್ಡು ಅವರಿಗೆ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಅವರನ್ನು ರೈಲ್ವೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕೇಶ್ವಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.