ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ | Haadiye Torida Haadi Jyothi S interviewed Baba Annu Siddi of Siddy Community Uttara Kannada


ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ

ತನ್ನ ಕುಟುಂಬದೊಂದಿಗೆ ಬಾಬಾ ಅಣ್ಣು ಸಿದ್ದಿ

ಹಾದಿಯೇ ತೋರಿದ ಹಾದಿ | Haadiye Torida Haadi : ಉತ್ತರ ಕನ್ನಡ ಜಿಲ್ಲೆಯ ಅರೆಬೈಲ್ ತಾಲೂಕಿನ ಕೆಳಾಸೆ ಗ್ರಾಮದ ಸಿದ್ದಿ ಸಮುದಾಯದ ಈ ಅಣ್ಣು ಬಾಬಾ ಈತನಕ ಸುಮಾರು 200ಕ್ಕೂ ಹೆಚ್ಚು ಶವಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಆಳದವರೆಗೆ ಮುಳುಗೆದ್ದು ಶವವನ್ನು ಹೊತ್ತುತರಬೇಕೆಂದರೆ ವ್ಯಕ್ತಿ ಎಂಥ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಯೋಚಿಸಿ. ಎಲ್ಲೇ ಯಾರೇ ಮುಳುಗಿ ಸತ್ತರೂ ಪೊಲೀಸಿನವರು ಇವರನ್ನೇ ಮೊರೆಹೋಗುತ್ತಿದ್ದರು; ಯಲ್ಲಾಪುರದಿಂದ 37ಕಿ. ಮೀ. ದೂರದಲ್ಲಿರುವ ಇರುವ ಸಾತೋಡಿ ಫಾಲ್ಸ್, ಸಿದ್ದಾಪುರ, ಅಂಕೋಲ, ಭಟ್ಕಳ, ಶಿರಸಿಯ ಫಾಲ್ಸ್ ಹೀಗೆ…  ‘ನಾನು ಏನೂ ಓದಿಲ್ಲ. ನಮ್ಮೂರಲ್ಲಿ ಆಗೆಲ್ಲ ಶಾಲೆಗಳೇ ಇರಲಿಲ್ಲ. ಹಾಗಾಗಿ ನಾನು ಶಾಲೆಯ ಮುಖವನ್ನೇ ಕಂಡವನಲ್ಲ. ಮುಳುಗಿದ ಶವಗಳನ್ನು ತೆಗೆಯಲು ಸುಮಾರು 5ರಿಂದ ಹತ್ತು ನಿಮಿಷವಾದರೂ ನೀರಿನಲ್ಲಿ ಮುಳುಗೆದ್ದು ಬರಬೇಕಾಗುತ್ತದೆ. ಆಳದಲ್ಲಿರುವ ಶವ ಅಷ್ಟು ಸುಲಭಕ್ಕೆ ಸಿಗದು. ಹಾಗಾಗಿ ಹುಡುಕಾಟಕ್ಕೇ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಅಪಾಯದ ಕೆಲಸವಾದ್ದರಿಂದ ಮನೆಯಲ್ಲಿ ಹೇಳದೆ ಫಾಲ್ಸ್​ಗೆ ತೆರಳಿಬಿಡುತ್ತಿದ್ದೆ. ಕೆಲವೊಮ್ಮೆ 4-5 ದಿನಗಳ ತನಕ ಮನೆಯ ಕಡೆ ಸುಳಿಯದೇ ಇದ್ದದ್ದೂ ಇದೆ’ ಎನ್ನುತ್ತಾರೆ.
ಜ್ಯೋತಿ. ಎಸ್, ಸಿಟೆಝೆನ್ ಜರ್ನಲಿಸ್ಟ್​, (Jyothi S)

(ಹಾದಿ 16)

ಒಮ್ಮೆ ಸಾತೋಡಿ ಫಾಲ್ಸ್​ನಲ್ಲಿ ಒಂದೇ ಸಲ 7 ಜನರು ಮುಳುಗಿ ತೀರಿಕೊಂಡಿದ್ದರು. ಬಹುಶಃ 2005- 2006 ನೇ ಇಸವಿ. 10 ಅಡಿ, 15 ಅಡಿ ಆಳಕ್ಕೆ ಮುಳುಗಿ ಎಲ್ಲಾ ಹೆಣಗಳನ್ನೂ ತೆಗೆದೆ. ನೀರಿನೊಳಗೆ ಹೋಗುವಾಗ ಸೊಂಟಕ್ಕೆ ಒಂದು ಹಗ್ಗವನ್ನು ಕಟ್ಟಿಕೊಂಡು ಮುಳುಗಿ ಹುಡುಕುತ್ತೇನೆ. ಶವದ ಕೈ ಸಿಗಲಿ, ಕಾಲು ಸಿಗಲಿ ಅದನ್ನು ಹಿಡಿದುಕೊಂಡು ಹಗ್ಗವನ್ನು ಒಮ್ಮೆ ಜಗ್ಗುತ್ತೇನೆ. ಹೀಗೆ ಮಾಡಿದರೆ, ಪೊಲೀಸರಿಗೆ ಸೂಚನೆ ಕೊಟ್ಟಂತೆ. ಒಮ್ಮೆ ಗಣೇಶ್ ಫಾಲ್ಸ್​ನಲ್ಲಿ 50 ಅಡಿ ನೀರಿತ್ತು. ಕೆಳಗೆ ಹೋದರೆ ಜೀವಂತ ಇದ್ದವರೇ ಮೇಲೆ ಬರುವುದು ಕಷ್ಟ. ಅಂತಹ ಸಮಯದಲ್ಲೂ ನಾನು ಶವಹೊತ್ತು ಹೊರಬಂದೆ.

ಫಾಲ್ಸ್​ಗಳಲ್ಲಿ ಸೂಚನಾ ಫಲಕಗಳನ್ನು ಹಾಕಿದರೂ ಜನ ಲೆಕ್ಕಿಸದೆ ನೀರಿಗಿಳಿಯುತ್ತಾರೆ. ಫೋಟೋ, ಮೋಜು, ಮಸ್ತಿ ಎಂದೆಲ್ಲಾ. ನಮ್ಮ ಪ್ರಾಣವನ್ನು ನಾವೇ ಕಾಪಾಡಿಕೊಳ್ಳಬೇಕೆನ್ನುವ ಕನಿಷ್ಟ ಪ್ರಜ್ಞೆ ಇರಬೇಕಲ್ಲವಾ? ಸಾತೋಡಿ ಫಾಲ್ಸ್​ನಲ್ಲಿ ತುಂಬ ಜನರು ಹೀಗೆ ಅನಾಹುತಕ್ಕೀಡಾಗುತ್ತಾರೆ. ಅದರಲ್ಲಿ ಹದಿಹರೆಯದವರೇ ಹೆಚ್ಚು. ಜೀವ ಅನ್ನುವುದು ಒಮ್ಮೆ ಹೋದರೆ ಅಷ್ಟೇ.

ಒಮ್ಮೆ ಕಾಳಿ ನದಿಯಲ್ಲಿ ತಾಯಿ ತನ್ನ ಎರಡು ಹೆಣ್ಣುಮಕ್ಕಳನ್ನು ಹಿಡಿದುಕೊಂಡೇ ಮುಳುಗಿ ಸತ್ತು ಹೋಗಿದ್ದರು. ಅವರನ್ನು ಹೊರತೆಗೆದೆ. ಬಹಳ ನೋವಾಯಿತು. ಹೀಗೆ ಆತ್ಮಹತ್ಯೆ ಮಾಡಿಕೊಂಡ ಶವಗಳನ್ನು ನೋಡಿದಾಗ ಸಮಾಜದ ಬಗ್ಗೆ ಆಕ್ರೋಶ ಉಂಟಾಗುತ್ತದೆ. ಅವರವರ ಮನೆಯವರು ಅವರನ್ನು ಜವಾಬ್ದಾರಿಯಿಂದ ನೋಡಿಕೊಂಡಾಗ ಇಂಥದೆಲ್ಲ ಘಟಿಸುವುದಿಲ್ಲ ಅಲ್ಲವೆ? ಸಮಾಜ ಎನ್ನುವುದು ಯಾರಿಂದಲೋ ರಚನೆಗೊಂಡಿಲ್ಲ. ಅದರೊಳಗಿರುವವರು ನಾವೇ.

ಚಿಕ್ಕ ವಯಸ್ಸಿನಲ್ಲಿ ಹುಡುಗರ ಜೊತೆಗೆ ಸೇರಿ ಈಜಾಡುವುದನ್ನು ಕಲಿತಿದ್ದೆ. ಈಜಾಡುತ್ತಾ ನೀರಲ್ಲಿ ಕಣ್ಣು ಬಿಡುವುದನ್ನು ಕಲಿತೆ. ಆಗ ನೀರಿನಲ್ಲಿ ಆಮೆ, ಮೀನು ಎಲ್ಲವನ್ನೂ ನೋಡುತ್ತ ಮುಟ್ಟುತ್ತ ಮೈಮರೆಯುತ್ತಿದ್ದೆ. ಅದೊಂದು ಅದ್ಭುತ ಲೋಕ. ಈ ಸೆಳೆತವೇ ನನ್ನನ್ನು ಹೆಚ್ಚು ಹೊತ್ತು ನೀರಿನಲ್ಲಿರುವಂತೆ ಪ್ರೇರೇಪಿಸುತ್ತಿತ್ತು. ಕ್ರಮೇಣ ಇದೊಂದು ವಿದ್ಯೆಯಂತೆ ನನಗೆ ಕರಗತವಾಗುತ್ತಾ ಹೋಯಿತು. ಕಣ್ಣು ಬಿಟ್ಟುಕೊಂಡೆ ನೀರಿನಲ್ಲಿ ಹುಡುಕಬೇಕು. ನಾನು ಕಿವಿಯಲ್ಲಿ, ಬಾಯಲ್ಲಿ ಕೊಬ್ಬರಿ ಎಣ್ಣೆ ಹಾಕಿಕೊಂಡು ನೀರಿನೊಳಗೆ ಇಳಿಯುತ್ತಿದ್ದೆ. ನೀರಿನೊಳಗೆ ಆಳಕ್ಕೆ ಹೋದಂತೆ ಕಪ್ಪಗೆ ಕಾಣಿಸುತ್ತಿತ್ತು. ಆಗ ಬಾಯಿಯಿಂದ ಕೊಬ್ಬರಿಎಣ್ಣೆ ಉಗುಳಿದರೆ ಎಲ್ಲ ತಿಳಿಯಾಗಿ, ಶುಭ್ರವಾಗಿ ಕಾಣಿಸುತ್ತಿತ್ತು. ಆಗ ಶವಗಳನ್ನು ಹುಡುಕುವುದು ಸುಲಭವಾಗುತ್ತಿತ್ತು.

TV9 Kannada


Leave a Reply

Your email address will not be published. Required fields are marked *