ಬೆಂಗಳೂರು: ಸಾಕಷ್ಟೂ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ನ ಮುಂದಿನ ಸಿಎಂ ವಿಚಾರಕ್ಕೆ ಖುದ್ದು ಹೈಕಮಾಂಡ್ ತೆರೆ ಎಳೆದು, ಈ ವಿಚಾರ ಚರ್ಚೆ ಮಾಡದಂತೆ ರಾಜ್ಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಆಗ ಕೊಂಚ ಸೈಲೆಂಟ್ ಆಗಿದ್ದ ಮುಂದಿನ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಗೆಲುವಿನ ಉತ್ಸಾಹದ ಬೆನ್ನಲ್ಲೇ ‘ಕೈ’ನಲ್ಲಿ ನಿಲ್ಲದ ಸಿಎಂ ಜಪ
ಮುಖ್ಯಮಂತ್ರಿ ಆಸೆ ಇನ್ನೂ ಜೀವಂತವಾಗಿಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರೋಕ್ಷವಾಗಿ ಸಿಎಂ ಗಾದಿ ಮೇಲೆ ಆಸೆ ಇದೆ ಎಂಬ ಸಂದೇಶ ರವಾನಿಸಿದ್ದಾರೆ. ಇದು ಕೈ ಒಳಗಿನ ಸಿಎಂ ವಿಚಾರದ ಶೀತಲ ಸಮರಕ್ಕೆ ತುಪ್ಪ ಸುರಿದಂತಾಗಿದೆ.
ನಿಲ್ಲದ ಸಿದ್ದರಾಮಯ್ಯ ‘ಸಿಎಂ ಕಹಾನಿ’
ಮತ್ತೆ ದಾಳ ಉರುಳಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದ ಮೇಲಿನ ಆಸೆ ಜೀವಂತವಾಗಿಸಿದ್ದಾರೆ. ಹಾನಗಲ್ನಲ್ಲಿ ಗೆಲ್ಲುತ್ತಿದ್ದಂತೆ ಮತ್ತೆ ಸಿಎಂ ಆಸೆ ಮೇಲೆ ಸಿದ್ದು ಕಣ್ಣುಹಾಕಿದ್ದು, ಪರೋಕ್ಷವಾಗಿ ಸಿಎಂ ಗಾದಿಯ ಮೇಲಿನ ಕನಸಿನ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಹೀಗೆ ಸಿದ್ದು ಸಿಎಂ ಕಹಾನಿ ಮುನ್ನೆಲೆಗೆ ಬರ್ತಿದ್ದಂತೆ ವಿರೋಧಿ ಬಣಗಳು ಫುಲ್ ಅಲರ್ಟ್ ಆಗಿವೆ. ತಂತ್ರ ರಣತಂತ್ರಕ್ಕೂ ಇದು ಸಾಕ್ಷಿಯಾಗ್ತಿದೆ.
ಕಿಚ್ಚು ಹಚ್ಚಿದ ಸಿಎಂ ಕನಸು
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಸಿಎಂ ಸ್ಟೋರಿ ಮತ್ತೆ ಕಿಚ್ಚು ಹಚ್ಚಿದೆ. ಶೀತಲ ಸಮರಕ್ಕೆ ಪೆಟ್ರೋಲ್ ಸುರಿದ ಸಿದ್ದು ನಡೆಯಿಂದ ಬಣಗಳು ಕಂಗಾಲಾಗಿವೆ. ಡಿಕೆಎಸ್, ಖರ್ಗೆ, ಪರಮೇಶ್ವರ್, ಸಿದ್ದು ಬಣಗಳ ನಡುವೆ ಪೈಪೋಟಿ ಶುರುವಾಗಿದೆ. ಅದಕ್ಕೆ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, 10 ಕೆಜಿ ಅಕ್ಕಿ ಕೊಡುತ್ತೇವೆ, ನಾನು ಸಿಎಂ ಆಸೆ ಬಿಟ್ಟಿದ್ದೇನಾ? ಅದನ್ನ ವರಿಷ್ಠರು ತೀರ್ಮಾನಿಸ್ತಾರೆ ಎಂಬ ಸಿದ್ದರಾಮಯ್ಯರ ಮಾತುಗಳು ಸಾಕ್ಷಿಯಾಗಿದೆ. ಒಟ್ನಲ್ಲಿ ಹೈಕಮಾಂಡ್ ಸೂಚನೆ ನಡುವೆಯೂ ಮುಂದಿನ ಸಿಎಂ ವಿಚಾರ ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಪದೇ ಪದೇ ಪ್ರತಿಧ್ವನಿಸಿ ಕಿಚ್ಚು ಹಚ್ಚುತ್ತಿದೆ. ಭವಿಷ್ಯದ ಮುಖ್ಯಮಂತ್ರಿ ವಿಚಾರದಲ್ಲಿ ಮನೆಯೊಂದು ನಾಲ್ಕು ಬಾಗಿಲಾಗಿರುವ ಕೈ ಮನೆಯಲ್ಲಿ ಸಿದ್ದರಾಮಯ್ಯರ ಸಂದೇಶ ಸಾಕಷ್ಟೂ ಸಂಚಲ ಸೃಷ್ಟಿಸಿದೆ.