ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್ | Karnataka Politics BJP Congress in Tweet war allegations on Corruption and Crime

ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್

ಸಿದ್ದರಾಮಯ್ಯ ಮತ್ತು ಬಿಜೆಪಿ ಮಾಡಿರುವ ಟ್ವೀಟ್

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಘೋಷಣೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಲವು ಕಾರಣಕ್ಕೆ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಮಂಗಳೂರಿನಲ್ಲಿ ಈಚೆಗೆ ನಡೆದ ನೈತಿಕ ಪೊಲೀಸ್​ಗಿರಿ ಪ್ರಕರಣ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ನೀಡಿದ ತ್ರಿಶೂಲ ದೀಕ್ಷೆಯ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಸಲೀ ಹಾಗೂ ಉಗ್ರಪ್ಪ ನಡುವಣ ಮಾತುಕತೆಯಲ್ಲಿ ಕೇಳಿಬಂದದ್ದ ಭ್ರಷ್ಟಾಚಾರ ಆರೋಪವನ್ನು ಪ್ರಸ್ತಾಪಿಸಿ ಬಿಜೆಪಿ ತಿರುಗೇಟು ನೀಡಿದೆ.

ಪೊಲೀಸರಿಗೂ ತ್ರಿಶೂಲ ಕೊಡಿ
ವಿಜಯಪುರ ಗ್ರಾಮೀಣ ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಸಾಂಪ್ರದಾಯಿಕ ದಿರಿಸಿನಲ್ಲಿ ಪೊಲೀಸ್ ಠಾಣೆಯ ಎದುರು ತೆಗೆಸಿಕೊಂಡಿರುವ ಗ್ರೂಪ್ ಫೋಟೊಗಳನ್ನು ಟ್ವೀಟ್ ಮಾಡಿರುವ ಅವರು, ‘ಪೊಲೀಸರ ವೇಷಭೂಷಣಗಳನ್ನಷ್ಟೇ ಯಾಕೆ ಬದಲಾಯಿಸಿದಿರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ‌ ಕನಸು ನನಸಾಗಬಹುದು’ ಎಂದು ವ್ಯಂಗ್ಯವಾಡಿದರು.

‘ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ‌ ಪೊಲೀಸ್‌ಗಿರಿಯ ದೌರ್ಜನ್ಯ, ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ, ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಇದಕ್ಕೆಲ್ಲ ಮುಖ್ಯಮಂತ್ರಿಯ ಬಹಿರಂಗ ಬೆಂಬಲ. ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ಗೂಂಡಾಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿದ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ‌ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ. ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ. ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ. ಬಸವರಾಜ ಬೊಮ್ಮಾಯಿ ಅವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ತಿರುಗೇಟು
ಸಿದ್ದರಾಮಯ್ಯ ಟ್ವೀಟ್​ಗೆ ತಿರುಗೇಟು ನೀಡಿರುವ ಬಿಜೆಪಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಡಿ.ಕೆ.ಶಿವಕುಮಾರ್ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ’ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಎಲ್ಲಿಯವರೆಗೆ ತಲುಪಿತ್ತು ಎಂದರೆ ಸ್ವತಃ ಪಕ್ಷದ ಆಸ್ತಿಯನ್ನೇ ನಕಲಿ‌ ಗಾಂಧಿ ಕುಟುಂಬ ಕಬಳಿಸಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ತಿಹಾರ್ ಯಾತ್ರೆ ಲಕ್ಷಣಗಳಿವೆ. ಜಾಮೀನಿನ ಮೂಲಕ ಜೈಲು ವಾಸ ತಪ್ಪಿಸಿಕೊಂಡಿದೆ ಅಷ್ಟೇ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಕುಟುಂಬದ ಹೆಸರಿ‌ನಲ್ಲಿ ದೇಶವನ್ನು ಕೊಳ್ಳೆ ಹೊಡೆದ ನಕಲಿ ಗಾಂಧಿ ಕುಟುಂಬದ ಆಸ್ತಿ ಎಷ್ಟೆಂದು ಯಾರಿಗಾದರೂ ಗೊತ್ತೇ? ಅದರಲ್ಲಿ ಬೇನಾಮಿ ಎಷ್ಟೆಂದು ಲೆಕ್ಕ ಹಾಕಿ ಹೇಳಲು ಸಾಧ್ಯವೇ? ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪಾಲೆಷ್ಟು ಎಂದು ಬಿಜೆಪಿ ಪ್ರಶ್ನಿಸಿದೆ.

ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕವನ್ನು ಲೂಟಿ ಮಾಡಿದ ಭ್ರಷ್ಟ ಕಾಂಗ್ರೆಸ್ಸಿಗನ ಸಂಕ್ಷಿಪ್ತ ಹೆಸರು ಎಂಎಂಕೆ. ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ಲೆಕ್ಕವನ್ನು ಜನರ ಮುಂದಿಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ? ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ. ಭ್ರಷ್ಟಾಚಾರದಲ್ಲಿ ವಿಶೇಷ ಸಾಧನೆ ಮಾಡಿ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ಪಕ್ಷದ ವಿಶೇಷ ಸಾಧಕರಿವರು ಎಂದು ಬಿಜೆಪಿ ಹೇಳಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್… ಎಷ್ಟೊಂದು ಭ್ರಷ್ಟರು. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ತವರುಮನೆಯಂತಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಬಿಜೆಪಿಗೆ ಮುಖ್ಯಮಂತ್ರಿಯ ಆಸರೆ, ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ತಂತ್ರ
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ: ಚುನಾವಣಾ ಪ್ರಚಾರ ವೇಳೆ ಬಸವರಾಜ ಬೊಮ್ಮಾಯಿ ವಾಗ್ದಾಳಿ

TV9 Kannada

Leave a comment

Your email address will not be published. Required fields are marked *