ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆ ದೇಶದ ಹಳ್ಳಿಗಳಲ್ಲೂ ಹೆಚ್ಚಾಗಿದ್ದು ಸೋಂಕಿತರು ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಹಳ್ಳಿಗಳಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಳ್ಳಿಗಳಲ್ಲಿ ಸೋಂಕು ಹರಡುತ್ತಿರುವ ವೇಗಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್‍ಗಳು ಇಂತಿದೆ..
ಕೋವಿಡ್ 19 ಈಗ ಹಳ್ಳಿ ಹಳ್ಳಿಗಳನ್ನು ವೇಗವಾಗಿ ವ್ಯಾಪಿಸುತ್ತಿದೆ. ಸೋಂಕಿತರು ಹಾಲನ್ನು ಡೈರಿಗಳಿಗೆ ತಂದು ಹಾಕುತ್ತಿರುವುದರಿಂದ ರೋಗ ಇನ್ನಷ್ಟು ಹಬ್ಬುತ್ತಿದೆ. ಗ್ರಾಮೀಣ ಭಾಗದ ಈ ಹೊಸ ಸಮಸ್ಯೆಯನ್ನು ಸರ್ಕಾರ, ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.

ಈಗಲೇ ಜಾಗೃತಿ ಮೂಡಿಸದಿದ್ದರೆ ಹಳ್ಳಿಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕೋವಿಡ್ ಸೋಂಕಿತರ ಮನೆಯ ರಾಸುಗಳಿಂದ ಕರೆದ ಹಾಲನ್ನು ಸೋಂಕಿತರೇ ನೇರವಾಗಿ ಡೈರಿಗೆ ತಂದು ಹಾಲು ಹಾಕುವುದು ಬೇಡ. ಸೋಂಕಿತರಲ್ಲದ ಮನೆಯ ಆರೋಗ್ಯವಂತ ಸದಸ್ಯರು ಹಾಲನ್ನು ತಂದುಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಬಹುದು.

ಡೈರಿಗೆ ಹಾಲು ಹಾಕಲು ಬಂದವರು ಕಡ್ಡಾಯವಾಗಿ ಶುಚಿತ್ವ, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಡೈರಿಗಳಲ್ಲಿ ಶುಚಿತ್ವ ಕಾಪಾಡುವುದರ ಜೊತೆಗೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು. ಹಾಲು ಉತ್ಪಾದಕ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಬೇಕು. ಪಶುವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು.

The post ‘ಹಾಲಿನ ಡೈರಿ ನೌಕರರನ್ನ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ’ appeared first on News First Kannada.

Source: newsfirstlive.com

Source link