ಹಾಲು, ನೀರು, ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನ ಆಗಿಲ್ಲ; ಸಿಎಂ ಬೊಮ್ಮಾಯಿ | CM Basavaraj Bommai has not made a decision on the increase in milk water and electricity rates


ಹಾಲು, ನೀರು, ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನ ಆಗಿಲ್ಲ; ಸಿಎಂ ಬೊಮ್ಮಾಯಿ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ದರ (Price) ಏರಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುವುದಿಲ್ಲ. ಎಲ್ಲಾ ಆಯಾಮಗಳಿಂದಲೂ ಚರ್ಚೆ ಮಾಡುತ್ತೇವೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪಗಳು ಬರೋದು ಸಹಜ ಎಂದಿದ್ದಾರೆ. ವೀಕೆಂಡ್ ಕರ್ಫ್ಯೂ (Weekend Curfew) ರದ್ದು ನಿರ್ಧಾರ ಒತ್ತಡದಿಂದ ಮಾಡಿದ್ದಲ್ಲ. ಕೊರೊನಾ ಕೇಸ್ ಹೆಚ್ಚಿದ್ದರೂ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಕೊರೊನಾ ಸೋಂಕಿತರ ಗುಣಮುಖ ದರವೂ ಹೆಚ್ಚಿದೆ. ಹೀಗಾಗಿ ಜನರಿಗೆ ಸಮಸ್ಯೆ ಆಗಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ಸಿಎಂ ತಿಳಿಸಿದರು.

ಮುಂದುವರಿದು ಮಾತನಾಡಿದ ಸಿಎಂ, ಕೃಷ್ಣಾ ಸೇರಿದಂತೆ ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ರಾಜ್ಯದ ವಾದ ಮಂಡಿಸುವ ತಜ್ಞರೊಂದಿಗೆ ಸಭೆ ಮಾಡುತ್ತಿದ್ದೇವೆ. ನಮ್ಮ ಕಾನೂನು ತಜ್ಞರ ತಂಡ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಿದೆ. ನಮ್ಮ ಜಲ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ, ಗಂಭೀರವಾಗಿ ಪರಿಗಣಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ಮಡುತ್ತೇವೆ ಅಂತ ತಿಳಿಸಿದರು.

ಕೊರೊನಾ ನಂಬರ್ ಹೆಚ್ಚಿದ್ರೂ ಪರಿಣಾಮ ಕಡಿಮೆ ಇದೆ ಎಂದು ತಿಳಿಸಿದ ಸಿಎಂ, ಜೀವ ಉಳಿಯಬೇಕು, ಜೀವನವೂ ಉಳಿಯಬೇಕು. ಹೀಗಾಗಿ ಎಲ್ಲವನ್ನೂ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇವೆ. ಕೊವಿಡ್ ಯಾರನ್ನೂ ಬಿಟ್ಟಿಲ್ಲ.  ದೇವೇಗೌಡರಿಗೆ ಕೊರೊನಾ ಅಷ್ಟು ತೀವ್ರವಾಗಿರಲಿಕ್ಕಿಲ್ಲ. ನಾನು ಅವರ ಕುಟುಂಬಸ್ಥರ ಜತೆ ಮಾತನಾಡುತ್ತೇನೆ. ಮಣಿಪಾಲ್ ವೈದ್ಯರ ಜತೆಗೂ ಮಾತನಾಡುತ್ತೇನೆ. ಈ ವಯಸ್ಸಲ್ಲೂ ಅವರು ಆರೋಗ್ಯವಾಗಿದ್ದಾರೆ. ಆದ್ರೆ ಕೊವಿಡ್ ಯಾರಿಗೂ ಬಿಟ್ಟಿಲ್ಲ ಅಂತ ಹೇಳಿದರು.

TV9 Kannada


Leave a Reply

Your email address will not be published. Required fields are marked *