– ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್

ಹಾವೇರಿ: ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಪ್ರತಿದಿನ 6.7 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ನಗರದಲ್ಲಿ ಈಗಾಗಲೇ 1,500 ಕಿ.ಲೀ. ಆಕ್ಸಿಜನ್ ಸಾಮಥ್ರ್ಯದ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಶಿಗ್ಗಾವಿ ಮತ್ತು ಹಾನಗಲ್ಲಿನಲ್ಲಿ ತಲಾ 500 ಕಿ.ಲೀ. ಆಕ್ಸಿಜನ್ ಸಾಮಥ್ರ್ಯದ ಪ್ಲಾಂಟ್‍ಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಹಿರೇಕೆರೂರು ಪಟ್ಟಣದಲ್ಲಿ ಆಕ್ಸಿಜನ್ ಪ್ಲಾಂಟ್ ಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ರಾಣೆಬೆನ್ನೂರಿನಲ್ಲಿ ಗ್ರಾಸಿಮ್ ಕಂಪನಿ ಹಾಗೂ ಸವಣೂರಿನಲ್ಲಿ ರುದ್ರ ಕಂಪನಿಗಳು ಸಿಎಸ್‍ಆರ್ ನಿಧಿ ಅಡಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸಲಿವೆ. ಹೀಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುವುದು ಎಂದು ವಿವರಿಸಿದರು.

ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಎಲ್ಲ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡುವಂತೆ ಕ್ರಮವಹಿಸಲಾಗುವುದು. ಅಕ್ಕಿ ಆಲೂರು, ರಟ್ಟಿಹಳ್ಳಿ, ಬೊಮ್ಮನಹಳ್ಳಿ, ಗುತ್ತಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಆಕ್ಸಿಜನ್ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಇಲ್ಲ, ತಜ್ಞ ವೈದ್ಯರು ಹಾಗೂ ಫಿಜಿಸಿಯನ್ ಗಳ ಕೊರತೆ ಇದೆ. ವೆಂಟಿಲೇಟರ್ ಇದ್ದರೂ ಅದನ್ನು ಪ್ರಾರಂಭ ಮಾಡಲು ಟೆಕ್ನೀಷಿಯನ್ ಗಳಿಲ್ಲ. ಅದರ ಜೊತೆ ಬ್ಲ್ಯಾಕ್ ಫಂಗಸ್ ಸಮಸ್ಯೆಗಳ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜೊತೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಲ್ಲದೆ ಒಟ್ಟು ಎರಡು ಕೋಟಿ ವ್ಯಾಕ್ಸಿನ್ ಗಾಗಿ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ನಲ್ಲಿ ಹಲವಾರು ಕಂಪನಿಗಳು ಭಾಗವಹಿಸಲಿವೆ ಎಂದು ವ್ಯಾಕ್ಸಿನ್ ಕೊರತೆ ಕುರಿತು ಸ್ಪಷ್ಟಪಡಿಸಿದರು.

The post ಹಾವೇರಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್: ಬೊಮ್ಮಾಯಿ appeared first on Public TV.

Source: publictv.in

Source link