ಬಾಲಿವುಡ್ ಸಿನಿ ಸೀಮೆಯಾಗ ಉತ್ತರ ಕರ್ನಾಟಕದ ಬಯಲು ಸೀಮೆಯ ಕನ್ನಡಿಗ ಹೆಸರು ಮಾಡ್ತಿದ್ದಾರೆ. ತಮ್ಮ ಅದ್ಭುತ ನೈಜ್ಯ ಫಿಲ್ಮ್ ಮೇಕಿಂಗ್ನಿಂದ 2021ರ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಹಾಗಾದ್ರೆ ಯಾರು ಆ ಕನ್ನಡಿಗ? ಯಾವುದು ಆ ಸಿನಿಮಾ..? ಪ್ರಶಸ್ತಿ ಬಂದಿದಕ್ಕೆ ಆ ನಿರ್ದೇಶಕನ ಹುಟ್ಟುರಿನಲ್ಲಿ ಜನ ಏನ್ ಮಾಡಿದ್ರು? ಅನ್ನೋದ್ರ ವಿವರ ಇಲ್ಲಿದೆ..

ಬಿಟೌನ್​ನಲ್ಲಿ ಸದ್ದು ಮಾಡಿದ ಮೋಟೆಬೆನ್ನೂರಿನ ಮಗ
ಕೆಲವೊಂದು ಸಲ ನಮ್ಮೋರಿಗೆ ಹಿತ್ತಲ ಗಿಡ ಮದ್ದಲ್ಲ ಅನ್ನಿಸಿಬಿಡುತ್ತೆ. ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿರುವ ಕಥೆ-ಕವಿತೆಗಳನ್ನ ನಮ್ಮ ನೆಲಕ್ಕೆ ತಂದು ಮಾಡೋದ್ರ ಬಗ್ಗೆಯೇ ಹೆಚ್ಚಿನ ಗಮನ. ಆದ್ರೆ ಅಕ್ಕಪಕ್ಕದವರು ತಮ್ಮ ನೆಲದ ಕಥೆಯನ್ನೇ ಸಿನಿಮಾ ಮಾಡಿ ಗೆಲ್ತಾ ನಿಲ್ತಾ ಬಂದಿದ್ದಾರೆ. ಪಕ್ಕದ ಮನೆ ಗೊಜ್ಜಿಗೆ ನಮ್ಮ ಮನೆ ಅನ್ನ ಸೇರಿಸಿ ಚಿತ್ರನ್ನ ಮಾಡೋರೇ ನಮ್ಮ ಸ್ಯಾಂಡಲ್ವುಡ್ನಲ್ಲಿ ಹೆಚ್ಚು-ಮೆಚ್ಚು. ಆದ್ರೆ ನಮ್ಮವರೇ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿ ಕಥೆ ಹೆಣೆದು ಅದ್ಭುತ ಫಿಲ್ಮ್ ಮೇಕಿಂಗ್ ಮಾಡೋರು ಕಣ್ಣಿಗೆ ಕಾಣೋದು ಕೊಂಚ ಕಮ್ಮಿ. ದೂರದ ಬಾಲಿವುಡ್ನಲ್ಲಿ ಕನ್ನಡದ ಸಿನಿ ಕಸುಬುದಾರರ ಕೈಚಳಕ ಎಂಥದ್ದು ಅನ್ನೋ ಗಮ್ಮತ್ತು ಆಗಾಗ ಸಾಬೀತು ಆಗುತ್ತಲೇ ಇರುತ್ತೆ.

‘‘ಮಿಷನ್ ಮಂಗಲ್’’.. ಖಿಲಾಡಿ ಅಕ್ಷಯ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಈ ಸಿನಿಮಾದ ಸೂತ್ರದಾರ ನಮ್ಮ ಕನ್ನಡದವರು, ಬೆಂಗಳೂರು ಮೂಲದವರು ಶಿವಣ್ಣ ಓಂ ಉಪ್ಪಿಯ ಸೂಪರ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದವರು. ಜಗನ್ ಶಕ್ತಿ ಅನ್ನೋ ಟ್ಯಾಲೆಂಟೆಡ್ ನಿರ್ದೇಶಕ ‘‘ಮಿಷನ್ ಮಂಗಳ್’’ ಸಿನಿಮಾವನ್ನ ಕಣ್ಣಿಗೆ ಕಟ್ಟೋ ಹಾಗೆ ಮನಸಿಗೆ ಮುಟ್ಟೋ ಹಾಗೆ ದಿಗ್ಧರ್ಶಿಸಿ ಗೆದ್ದಿದ್ರು.

ಬಾಲಿವುಡ್ ಸಿನಿರಂಗದಲ್ಲಿ ಮಿಂಚಿದ ಕನ್ನಡದ ಪ್ರತಿಭೆ
ಬಾಲಿವುಡ್ ನಲ್ಲಿ ಗುಡ್ ಅನಿಸಿಕೊಂಡ ಹಾವೇರಿ ಹೈದ!

ಇನ್ನು ಕಾಲಿವುಡ್ ನಟ ಸೂರ್ಯ ನಟನೆಯ ‘ಸೂರರೈ ಪೋಟ್ರು’ ಸಿನಿಮಾ ಕನ್ನಡಿಗನ ಕಥೆ. ಕ್ಯಾಪ್ಟನ್ ಗೊರೂರ್ ರಾಮಸ್ವಾಮಿ ಅಯ್ಯಂಗರ್ ಗೋಪಿನಾಥ್ ಅವರ ಜೀವನ ಕಥೆಯನ್ನ ಸಿನಿಮಾದಲ್ಲಿ ನೋಡಿ ಇಡೀ ದೇಶವೇ ಮೆಚ್ಚಿಕೊಂಡಿತ್ತು. ಕನ್ನಡದ ಕಥೆ ಮತ್ತು ಕಥೆಗಾರರು ನಿರ್ದೇಶಕ ತಂತ್ರಜ್ಞರು ಹಿಂದಿನಿಂದಲೂ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಿಂಚುತ್ತಲೇ ಇದ್ದಾರೆ. ಆದ್ರೆ ನಮ್ಮವರಿಗೆ ನಮ್ಮವರನೇ ಗುರುತಿಸಲು ಸ್ಪಲ್ಪ ಕಣ್ಣುಮಂಜೆನ್ನಬಹುದು. ಈಗ ನೇರವಾಗಿ ವಿಷಯಕ್ಕೆ ಬಂದು ಬಿಡ್ತೀವಿ. ದೂರದ ಬಾಲಿವುಡ್ನಲ್ಲಿ ಕರ್ನಾಟಕ ಮೂಲದ ಫಿಲ್ಮ್ ಮೇಕರ್ ಒಬ್ಬರು ತಮ್ಮ ಸಿನಿಮಾಗಳಿಂದ ಸದ್ದು ಮಾಡ್ತಿದ್ದಾರೆ. ತಮ್ಮ ಸಿನಿಮಾದ ಮೂಲಕ ದಾದಾ ಸಾಹೇಬ್ ಅಂತರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್​​ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಹಾವೇರಿಯ ಹೈದನ ಹಿಂದಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕದ ಅನೇಕ, ಅನೇಕ ಪ್ರತಿಭೆಗಳು ಬಾಲಿವುಡ್ ಸಿನಿರಂಗದ ತೆರೆಯ ಮುಂದೆ ಹಾಗೂ ತೆರೆಯ ಹಿಂದೆ ಈ ಹಿಂದಿನಿಂದಲೂ ಸಾಧನೆಯ ಹೆಸರನ್ನ ಮಾಡ್ತಾನೆ ಬಂದಿದ್ದಾರೆ. ಈಗ ಆ ಸಾಲಿಗೆ ಮತ್ತೊಬ್ಬ ಕನ್ನಡಿಗ ಸದ್ದಿಲ್ಲದೆ ಬಂದು ನಿಂತಿದ್ದಾರೆ. ಹಾಗಾದ್ರೆ ಯಾರು ಆ ಸಾಧನೆಯ ಕನ್ನಡದ ನಿರ್ದೇಶಕ ಅನ್ನೋ ಪ್ರಶ್ನೆಗೆ ಉತ್ತರ ಸಾಗರ ಬಳ್ಳಾರಿ.

ಸಾಗರ ಬಳ್ಳಾರಿ, ನಿರ್ದೇಶಕ

ಅವರದ್ದು ತಲೆ ತಲೆಮಾರಿನಿಂದ ಕೃಷಿ ನಂಬಿ ಬದುಕಿರುವ ರೈತಾಪಿ ಕುಟುಂಬ. ಬ್ರಿಟಿಷರ ಕಾಲದಿಂದಲೇ ಮುಂಬೈನಲ್ಲಿ ವ್ಯಾಪಾರ ವಹಿವಾಟು ನಡೆಸ್ತಾ ಇದ್ದ ವಂಶಸ್ಥರು ಈಗ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಕಾಟನ್ ಕಿಂಗ್ ಆಗಿದ್ದ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಬಳ್ಳಾರಿ ಕುಟುಂಬಸ್ಥರ ಸದಸ್ಯರೊಬ್ಬರು ಈಗ ಸಿನಿರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಸಾಗರ ಬಳ್ಳಾರಿ ಎಂಬುವ ನವ ನಿರ್ದೇಶಕ ಸಿನಿಮಾ 2021ರ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಸಾಗರ ಬಳ್ಳಾರಿ ನಿರ್ದೇಶನದ ‘ಜಂಗಲ್ ಕ್ರೈ’ ಸಿನಿಮಾ
ರಗ್ಬಿ ಆಟದ ಬಗ್ಗೆ ಬೆಳಕು ಚೆಲ್ಲುವ ‘ಜಂಗಲ್ ಕ್ರೈ’ ಚಿತ್ರ

ಸಾಗರ ಬಳ್ಳಾರಿ ನಿರ್ದೇಶನದ “ಜಂಗಲ್ ಕ್ರೈ” ಅನ್ನೋ ರಗ್ಬಿ ಕ್ರೀಡಾಧಾರಿತ ಹಿಂದಿ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಎಂದು ಪರಿಗಣಿಸಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದೆ. ಮೊನ್ನೆ ನಡೆದ 2021ರ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ “ಜಂಗಲ್ ಕ್ರೈ” ಎಂಬ ಹಿಂದಿ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರಕಿದೆ. ಇದರ ನಿರ್ದೇಶಕ ಬಾಲಿವುಡ್ ನ ಸಾಗರ್ ಬಳ್ಳಾರಿ ಅವರ ಹುಟ್ಟುರಿನಲ್ಲಿ ಸಂಭ್ರಮವೋ ಸಂಭ್ರಮ.

ಸಾಗರ ಬಳ್ಳಾರಿ ಸಾಧನೆಗೆ ಮೋಟೆಬೆನ್ನೂರು ಗ್ರಾಮದಲ್ಲಿ ಸಂಭ್ರಮ
ಜಂಗಲ್ ಕ್ರೈ ಚಿತ್ರಕಥೆ ಒಡಿಶಾದ ಕಳಿಂಗಾ ಇನ್ಸ್​ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ 14 ದೀನದಲಿತ ಮತ್ತು ಅನಾಥ ಮಕ್ಕಳ ಸ್ಫೂರ್ತಿದಾಯಕ ನೈಜ ಕಥೆಯನ್ನ ಆಧರಿಸಿದ್ದಾಗಿದೆ. 2007 ರಲ್ಲಿ ಯುಕೆಯಲ್ಲಿ ನಡೆದ ಅಂತರರಾಷ್ಟ್ರೀಯ ಜೂನಿಯರ್ ರಗ್ಬಿ ಪಂದ್ಯಾವಳಿಯಲ್ಲಿ ಕಾಡಿನ ಆದಿವಾಸಿ ಮಕ್ಕಳು ಹೇಗೆ ಟ್ರೋಫಿ ಗೆಲ್ತಾರೆ ಹಾಗೂ ಅವರ ವಿಜಯೋತ್ಸವದ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಸಾಗರ ಬಳ್ಳಾರಿ ಕೆಲ ವರ್ಷಗಳಿಂದ ಸಿನಿಮಾ ಕನಸಿಗಾಗಿ ಮುಂಬೈನಲ್ಲಿ ಸೆಟಪ್ ಆಗಿದ್ದಾರೆ.

ಈಗಾಗಲೇ ಭೆಜಾ ಫ್ರೈ ಮತ್ತು ಭೆಜಾ ಫ್ರೈ -2 ಸಿನಿಮಾಗಳನ್ನ ಮಾಡಿ ಬಿಟೌನ್​ನಲ್ಲಿ ಸೈ ಅನ್ನಿಸಿಕೊಂಡಿರುವ ಸಾಗರ ಬಳ್ಳಾರಿಯವ ಜಂಗಲ್ ಕ್ರೈ ಅನ್ನೋ ಸಿನಿಮಾಕ್ಕೆ ಈಗ ಪ್ರಶಸ್ತಿ ಲಭಿಸಿದೆ. ಯಾಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಸಾಗರ್ ಅವರ ಸಿನಿ ಸಾಧನೆಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಫಾಲ್ಕೆ ಸಿನಿಮೋತ್ಸವದಲ್ಲಿ ಸಾಗರ್ ಚಿತ್ರಕ್ಕೆ ಪ್ರಶಸ್ತಿ
ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್​​ನಲ್ಲಿ ಕನ್ನಡಿಗನಿಗೆ ಪ್ರಶಸ್ತಿ

ಮೋಟೆಬೆನ್ನೂರು ಗ್ರಾಮದಲ್ಲಿ ಬಳ್ಳಾರಿ ಕುಟುಂಬಕ್ಕೆ ದೊಡ್ಡ ಹೆಸರು ಇದೆ. ಈಗೀನ ಬ್ಯಾಡಗಿ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಕೂಡಾ ಇವರಿಗೆ ಸಂಬಂಧಿಕರು ಆಗುತ್ತಾರಂತೆ. ಸುದ್ದಿ ತಿಳಿದ ಬಳಿಕ ಮನೆ ಹಾಗೂ ಗ್ರಾಮದಲ್ಲಿ ಸಿಹಿಹಂಚಿ ಸಂಭ್ರಮ ಪಟ್ಟಿದ್ದಾರೆ. ಎಲ್ಲೊ ಹುಟ್ಟಿ ದೂರದ ಮುಂಬೈನಲ್ಲಿ ಸಿನಿಮಾ ರಂಗದೊಳಗೆ ಸಾಧನೆ ಮಾಡಿದ್ದಕ್ಕೆ ಗ್ರಾಮಸ್ಥರು ಅಲ್ಲದೆ ಹಾವೇರಿ ಜಿಲ್ಲೆಗೆ ಇದೊಂದು ಹೆಮ್ಮೆಯಾಗಿದೆ. ಕಚ್ಚಾ ಲಿಂಬೂ, ಭೆಜಾ ಫ್ರೈ, ಭೆಜಾ ಫ್ರೈ -2, ಹಮ್ ತುಮ್ ಶಬಾನಾ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿ ಡೈರೆಕ್ಟರ್ ಆಗಿದ್ದಾರೆ. ಇದರ ಜೊತೆಗೆ ಸಾಗರ್ ತನ್ನ ಸ್ಥಳೀಯ ಮತ್ತು ಸಂಬಂಧಿಕರೊಂದಿಗಿನ ಸಂಪರ್ಕವನ್ನು ಎಂದಿಗೂ ಕಳೆದುಕೊಂಡಿಲ್ಲ ಮತ್ತು ಅವನು ವರ್ಷಕ್ಕೊಮ್ಮೆಯಾದರೂ ಹಾವೇರಿಗೆ ಭೇಟಿ ನೀಡುತ್ತಿದ್ದಾನೆ. ಇಲ್ಲಿಯತನಕ ಇಂತಹ ಪ್ರತಿಭೆ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹೆಸರು ಮಾಡಿದೆ ಎಂಬುವುದು ಯಾರಿಗೂ ತಿಳಿದಿರಲಿಲ್ಲ. ಈಗ ಗ್ರಾಮಕ್ಕೆ ಗ್ರಾಮವೆ ಸಾಗರ್ ಕೆಲಸಗಳನ್ನು ಹಾಡಿಹೊಗಳುತ್ತಿವೆ.

ಇಂಥಹ ನಿರ್ದೇಶಕಱಕೆ ಕನ್ನಡ ಚಿತ್ರರಂಗಕ್ಕೆ ಬರುತ್ತಿಲ್ಲ?
ಈಗ ನಮ್ಮ ಕನ್ನಡ ಸಿನಿರಂಗ ಅಕ್ಕ ಪಕ್ಕದ ಇಂಡಸ್ಟ್ರಿಗಳ ಸರಿ ಸಮಾನಾಗಿ ಬೆಳೆಯುತ್ತಿದೆ. ನಮ್ಮ ಸಿನಿಮಾಗಳ ಬಗ್ಗೆಯೂ ಹೊರ ರಾಜ್ಯದಲ್ಲಿ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಪಳಗಿರೋರು ನಮ್ಮ ಸ್ಯಾಂಡಲ್ವುಡ್ ಸಿನಿರಂಗಕ್ಕೆ ಬಂದು ತಮ್ಮ ತಮ್ಮ ಅನುಭವವನ್ನ ಧಾರೆ ಎರೆದ್ರೆ ಖಂಡಿತ ಚಿತ್ರರಂಗ ಉತ್ತುಂಗಕ್ಕೆ ಹೋಗುತ್ತೆ. ಸಾಗರ ಬಳ್ಳಾರಿ ಅವರ ಸಿನಿ ಸಾಧನೆ ಹಾಗೂ ಅವರಿಗಿರೋ ನಾಡು ನುಡಿಯ ಮೇಲಿನ ಭಾಷ ಪ್ರೇಮ ನಿಜಕ್ಕೂ ಮೆಚ್ಚುವಂತದ್ದು. ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನೂರಿತ ತಂತ್ರಜ್ಞರ ಅವಶ್ಯಕತೆ ತುಂಬಾನೇ ಇದೆ. ಸಾಗರ ಬಳ್ಳಾರಿ ಅವರಂಥಹ ಕೆಲಸ ಕಲಿತಿರುವ ತಂತ್ರಜ್ಞರು ಕನ್ನಡಕ್ಕೆ ಬಂದ್ರೆ ಒಳ್ಳೆ ಒಳ್ಳೆಯ ಸಿನಿಮಾ ಬರೋದ್ರಲ್ಲಿ ನೋ ಡೌಟ್.

The post ಹಾವೇರಿ ಹೈದನ ಸಿನಿ ಕಹಾನಿ.. ‘ಜಂಗಲ್ ಕ್ರೈ’ ಇನ್​​​ಸ್ಪೈರಿಂಗ್ ಸಿನಿಯಾನಕ್ಕೆ ಪ್ರಶಸ್ತಿಗಳ ಬಹುಪರಾಕ್ appeared first on News First Kannada.

Source: newsfirstlive.com

Source link