ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾಸನ ಜಿಲ್ಲೆ ಕೊರೊನಾ ಸೋಂಕು ಹರಡುವಿಕೆ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಹಾವಳಿ ಹತೋಟಿಗೆ ತರುವ ನಿಟ್ಟಿನಲ್ಲಿ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ-ಬುಧವಾರ- ಶುಕ್ರವಾರ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ, ಉಳಿದ ನಾಲ್ಕು ದಿನ ಹಾಲು, ಮೆಡಿಕಲ್ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಲಾಕ್ ಮಾಡುವ ಆದೇಶ ಹೊರಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ವಾರದ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಮಾಡಿರುವ ಕಾರಣ ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಅಲ್ಲದೆ ರೆಸ್ಟೋರೆಂಟ್, ಬಾರ್ ಗಳು ಸಹ ಸಂಪೂರ್ಣ ಬಂದ್ ಆಗಲಿದ್ದು, ನಾಲ್ಕು ದಿನ ಮದ್ಯಪಾನಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಈ ಸಂಬಂಧ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಅಭಿಪ್ರಾಯವನ್ನು ಪಡೆದು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯ ಜನರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ತರೆಯಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಸತಿಗೃಹಗಳಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಕೋವಿಡ್ ಸೋಂಕಿತ ವೃದ್ಧರಿಗೆ ಮನೆಯಲ್ಲೇ ಐಸೋಲೇಶನ್ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಹಾಗೂ ಔಷಧ ಸೌಲಭ್ಯ ಒದಗಿಸಲು ತಿಳಿಸಲಾಗಿದೆ ಎಂದು ತಿಳಿಸಿದರು.

ಹಾಸ್ಟೆಲ್ ಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಅಗತ್ಯ ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೂರವಾಣಿ ಕರೆಮಾಡಿ ಸಲಹೆ ಸೂಚನೆಯನ್ನು ನೀಡಿದ್ದಾರೆ. ಅವರ ಅಣತಿಯಂತೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

The post ಹಾಸನದಲ್ಲಿ ಮದ್ಯಪ್ರಿಯರಿಗೆ ಶಾಕ್- ವಾರದಲ್ಲಿ ನಾಲ್ಕು ದಿನ ಎಣ್ಣೆ ಸಿಗಲ್ಲ appeared first on Public TV.

Source: publictv.in

Source link