ಹಾಸನ: ‘ಕೈ ಮುಗಿದು ಪ್ರಾರ್ಥಿಸುತ್ತೇನೆ, ಮೊದಲು ಬಿಜೆಪಿ ಕಿತ್ತಾಕಿ’; ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ | Karnataka Legislative Assembly Opposition leader Siddaramaiah talks in Hassan and requests voters to remove BJP government


ಹಾಸನ: ‘ಕೈ ಮುಗಿದು ಪ್ರಾರ್ಥಿಸುತ್ತೇನೆ, ಮೊದಲು ಬಿಜೆಪಿ ಕಿತ್ತಾಕಿ’; ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ

ಸಿದ್ದರಾಮಯ್ಯ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ. ಬೆಲೆ ಏರಿಕೆ ಹಾಗೂ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿದ್ದು, ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಡಿಸಿ ಕಛೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಲಾಗಿದೆ. ಬಿಜೆಪಿ ವಿರುದ್ದ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಸನದಲ್ಲಿ ಹೋರಾಟ ನಡೆಸಿದೆ. ನಂತರ ಮಾತನಾಡಿದ ಸಿದ್ದರಾಮಯ್ಯ, ‘‘ಕೈಮುಗಿದು ಪ್ರಾರ್ಥಿಸುತ್ತೇನೆ, ಮೊದಲು ಬಿಜೆಪಿ ಕಿತ್ತಾಕಿ’’ ಎಂದು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದುರಾಡಳಿತವನ್ನು ಮುಚ್ಚಿಹಾಕಲು ಕೋಮುವಾದವನ್ನು ಸೃಷ್ಟಿಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ:

ಭ್ರಷ್ಟಾಚಾರ ವಿರೋಧಿ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ‘‘ಮೋದಿಯಷ್ಟು ಸುಳ್ಳು ಹೇಳೋ ಪ್ರಧಾನಮಂತ್ರಿ ಮತ್ತೊಬ್ಬರಿಲ್ಲ. ಇಡೀ ದೇಶದ ಇತಿಹಾಸದಲ್ಲಿ ಮೋದಿಯಂತಹ ದುರಾಡಳಿತ ಕಂಡಿಲ್ಲ’’ ಎಂದಿರುವ ವಿಪಕ್ಷ ನಾಯಕ, ‘‘ಪೆಟ್ರೋಲ್, ಡೀಸೆಲ್‌, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದರು. ಮಾತೆತ್ತಿದರೆ ನನಗೆ 52 ಇಂಚಿನ ಎದೆ ಇದೆ ಎನ್ನುತ್ತಾರೆ. 52 ಇಲ್ಲದಿದ್ರೆ 58-60 ಇಂಚಿನ ಎದೆ ಇಟ್ಟುಕೊಳ್ಳಲಿ‌ ಬೇಡ ಅಂದೋರು ಯಾರು? ಬಾಡಿ ಬಿಲ್ಡರ್‌ಗಳ ಎದೆ‌ ಇನ್ನೂ ಜಾಸ್ತಿ‌ ಇರುತ್ತದೆ’’ ಎಂದು ಲೇವಡಿ ಮಾಡಿದ್ದಾರೆ.

‘‘ಕಾಂಗ್ರೆಸ್ ಏನು ಮಾಡಿಲ್ಲ‌ ಎಂದು ಹೇಳಿದ್ದರು. ಆದರೆ ಈಗ ಮೋದಿ ಮಾಡುತ್ತಿರೋದೇನು? ದೇಶದಲ್ಲಿ‌ ಎಲ್ಲವನ್ನೂ ಮಾರಲು ಹೊರಟಿದ್ದಾರೆ. ದುರಾಡಳಿತ ಮುಚ್ಚಿಹಾಕಲು ಕೋಮುವಾದವನ್ನ ಸೃಷ್ಟಿಮಾಡಿದ್ದಾರೆ. ಜಾತ್ರೆಯಲ್ಲಿ ವ್ಯಾಪಾರ, ಹಲಾಲ್, ನೆನ್ನೆ ಮೊನ್ನೆಯದಾ? ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಕಿತ್ತುಹಾಕಿ’’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ:

ಜೆಡಿಎಸ್‌ನವರು ಬಿಜೆಪಿ ಬಿ ಟೀಂ ಎಂದ ಸಿದ್ದರಾಮಯ್ಯ, ‘‘20-30 ಸ್ಥಾನಗಳು ಬಂದ್ರೆ ಸಾಕು ಎಂದು ಕುಳಿತಿದ್ದಾರೆ. ಈಗ 123 ಸ್ಥಾನ ಗೆಲ್ಲುತ್ತೇವೆ ಅನ್ನುತ್ತಿದ್ದಾರೆ. ಇದು ಸಾಧ್ಯವೇ?’’ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಮೈತ್ರಿ ಸರ್ಕಾರ ಸಿದ್ದರಾಮಯ್ಯರಿಂದ ಹೋಯ್ತು ಎನ್ನುತ್ತಾರೆ. 80 ಸ್ಥಾನ ಗೆದ್ದ ನಾವು 37 ಸ್ಥಾನ ಗೆದ್ದ ಜೆಡಿಎಸ್​​ಗೆ ಅಧಿಕಾರ ನೀಡಿದ್ದೆವು. ಸಿಎಂ ಆದ ನಂತರ ತಾಜ್​ವೆಸ್ಟೆಂಡ್ ಹೋಟೆಲ್ ಸೇರಿದರು. ಕೊಟ್ಟ ಕುದುರೆ ಏರದವ ಧೀರನೂ ಅಲ್ಲ ಶೂರನೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ ಸಿದ್ದರಾಮಯ್ಯ.

ಹಾಸನದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ:

TV9 Kannada


Leave a Reply

Your email address will not be published.