ಹಾಸನ: ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಇಂದು ನಡೆದ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ಸಮ್ಮುಖದಲ್ಲಿಯೇ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಪಕ್ಷದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಲ ಕಾರ್ಯಕರ್ತರು ಆಕ್ರೋಶ ಹೊರಹಾಕಿ, ಎನ್.ಆರ್.ಸಂತೋಷ್ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಮರಿಸ್ವಾಮಿ ಬೆಂಬಲಿತ ರಂಗನಾಥ್, ಎನ್.ಆರ್.ಸಂತೋಷ್ ವಿರುದ್ಧ ಆರೋಪ ಮಾಡಿದ್ದು, ಸಂತೋಷ್ ಅರಸೀಕೆರೆಯ ಮೂಲ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಈ ವೇಳೆ ಎರಡು ಕಡೆವರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಕೈ ಕೈ ಮೀಲಾಯಿಸಿದ್ದಾರೆ.
ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೋಪಾಲಯ್ಯ ಅವರ ಎದುರಲ್ಲೇ ಮೂಲ ಕಾರ್ಯಕರ್ತರಾಗಿರುವ ರಂಗನಾಥ್ ಮೇಲೆ ಎನ್.ಆರ್.ಸಂತೋಷ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇಂದಿನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಸಭೆಯಲ್ಲಿ ಹಾಜರಿದ್ದರು.