ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​ | Kiran Raj and Ranjani Raghavan starrer Kannadathi serial will be dubbed into Hindi


ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಕಿರುತೆರೆಯ ಖ್ಯಾತ ನಟ ಕಿರಣ್​ ರಾಜ್​ (Kiran Raj) ಹಾಗೂ ನಟಿ ರಂಜನಿ ರಾಘವನ್​ ಅವರು ಅಭಿನಯಿಸುತ್ತಿರುವ ‘ಕನ್ನಡತಿ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ವಿಶೇಷ ಕಥಾಹಂದರ ಇರುವ ಈ ಸೀರಿಯಲ್​ಗೆ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಕಿರಣ್​ ರಾಜ್​ ಹಾಗೂ ರಂಜನಿ ರಾಘವನ್​ ಜೋಡಿಯನ್ನು ಜನರು ಇಷ್ಟಪಟ್ಟಿದ್ದಾರೆ. ಈಗ ಅನೇಕ ತಿರುವುಗಳೊಂದಿಗೆ ಕುತೂಹಲದ ಘಟ್ಟವನ್ನು ಈ ಸೀರಿಯಲ್​ ತಲುಪಿದೆ. ಇದರ ಜೊತೆಗೆ ಕರುನಾಡಿನ ಗಡಿ ಮೀರಲು ಕೂಡ ‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಯತ್ನಿಸಿದೆ. ಹೌದು, ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡತಿ’ ಈಗ ಹಿಂದಿಗೆ ಡಬ್​ ಆಗುತ್ತಿದೆ. ಆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ತಯಾರಿ ನಡೆಯುತ್ತಿದೆ. ಕನ್ನಡದ ಸೀರಿಯಲ್​ ಈ ರೀತಿ ದೇಶಾದ್ಯಂತ ಹವಾ ಸೃಷ್ಟಿ ಮಾಡುತ್ತಿರುವುದು ಕಿರಣ್​ ರಾಜ್​ ಹಾಗೂ ರಂಜನಿ ರಾಘವನ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸೀರಿಯಲ್​ನಲ್ಲಿ ಹರ್ಷ ಎಂಬ ಪಾತ್ರವನ್ನು ಕಿರಣ್​ ರಾಜ್​ ನಿಭಾಯಿಸುತ್ತಿದ್ದು, ಭುವಿ ಎಂಬ ಪಾತ್ರಕ್ಕೆ ರಂಜನಿ ರಾಘವನ್ (Ranjani Raghavan) ಬಣ್ಣ ಹಚ್ಚಿದ್ದಾರೆ. ಕನ್ನಡದ ಸೊಗಡಿನ ಈ ಕಥೆಯನ್ನು ಹಿಂದಿ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕೌತುಕ ಈಗ ಮನೆ ಮಾಡಿದೆ.

ನಟ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಮೊದಲು ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ಆ ಮೂಲಕ ಅಲ್ಲಿನ ಪ್ರೇಕ್ಷಕರಿಗೆ ಅವರು ಪರಿಚಿತರಾಗಿದ್ದಾರೆ. ಈಗ ‘ಕನ್ನಡತಿ’ ಡಬ್ಬಿಂಗ್​ ವರ್ಷನ್​ ಮೂಲಕ ಮತ್ತೆ ಅವರು ಹಿಂದಿ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಈ ಧಾರಾವಾಹಿ ಹಿಂದಿಗೆ ಡಬ್​ ಆಗಲಿದೆ. ಕಲರ್ಸ್​ ರಿಷ್ತೆ ಯುಕೆ ವಾಹಿನಿಯಲ್ಲಿ ಶೀಘ್ರವೇ ಇದರ ಪ್ರಸಾರ ಆರಂಭವಾಗಲಿದೆ. ಮರಾಠಿಗೂ ಈ ಸೀರಿಯಲ್​ ಡಬ್​ ಆಗಿದೆ.

ಮೊದಲ ಬಾರಿಗೆ ಲಾಕ್​ ಡೌನ್​ ಆರಂಭ ಆದಾಗ ಕಿರುತೆರೆಯಲ್ಲಿ ಡಬ್ಬಿಂಗ್​ ಟ್ರೆಂಡ್​ ಹೆಚ್ಚಿತ್ತು. ಹಿಂದಿಯ ಅನೇಕ ಜನಪ್ರಿಯ ಧಾರಾವಾಹಿಗಳು ಕನ್ನಡಕ್ಕೆ ಡಬ್​ ಆಗಿ ಪ್ರಸಾರವಾದವು. ಅವುಗಳಿಗೆ ಭರ್ಜರಿ ಟಿಆರ್​ಪಿ ಕೂಡ ಸಿಕ್ಕಿತ್ತು. ಇನ್ನೇನು ಕನ್ನಡದ ಕಿರುತೆರೆಯನ್ನು ಡಬ್ಬಿಂಗ್​ ಧಾರಾವಾಹಿಗಳೇ ಆಕ್ರಮಿಸಿಕೊಳ್ಳುತ್ತವೆ ಎಂಬ ಚಿಂತೆ ಅನೇಕರನ್ನು ಕಾಡಿತ್ತು. ಆದರೆ ಹಾಗಾಗಿಲ್ಲ. ಕನ್ನಡದ ಮೂಲ ಕಂಟೆಂಟ್​ಗಳು ಈಗ ಮತ್ತೆ ಶೈನ್​ ಆಗುತ್ತಿವೆ. ಈ ನಡುವೆ ಕನ್ನಡದ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿರುವುದು ವಿಶೇಷ.

ಕಿರಣ್​ ರಾಜ್​ ಅವರಿಗೆ ‘ಕನ್ನಡತಿ’ ಸೀರಿಯಲ್​ನಿಂದ ಒಂದು ಇಮೇಜ್​ ಸಿಕ್ಕಿದೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿ, ಜನರನ್ನು ರಂಜಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಭರ್ಜರಿ ಗಂಡು’ ಚಿತ್ರದ ಶೂಟಿಂಗ್​ ಮುಗಿಸಿದ್ದಾರೆ. ಈಗ ‘ಬಡ್ಡೀಸ್​’ ಸಿನಿಮಾದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಟೀಸರ್ ಏಪ್ರಿಲ್ 25ರಂದು ಬಿಡುಗಡೆ ಆಗಲಿದೆ. ಅದಕ್ಕಾಗಿ ಕಿರಣ್​ ರಾಜ್​ ಅಭಿಮಾನಿಗಳು ಕಾದಿದ್ದಾರೆ. ಜೂನ್​ನಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇತ್ತೀಚೆಗೆ ಪೋಸ್ಟರ್​ ರಿಲೀಸ್​ ಮೂಲಕ ಈ ಸಿನಿಮಾ ಗಮನ ಸೆಳೆದಿತ್ತು.

TV9 Kannada


Leave a Reply

Your email address will not be published. Required fields are marked *