ಹಿಂದಿನಿಂದಲೂ ನಾರಾಯಣಗುರುವನ್ನು ಬದಿಗೆ ಸರಿಸುತ್ತಿದ್ದಾರೆ: ಡಿಕೆ ಶಿವಕುಮಾರ್ ಆರೋಪ | BJP Neglecting Narayanaguru Alleges DK Shivakumar Congress will Prepare Separate Manifesto for Bengaluru


ಹಿಂದಿನಿಂದಲೂ ನಾರಾಯಣಗುರುವನ್ನು ಬದಿಗೆ ಸರಿಸುತ್ತಿದ್ದಾರೆ: ಡಿಕೆ ಶಿವಕುಮಾರ್ ಆರೋಪ

ಡಿಕೆ ಶಿವಕುಮಾರ್

ಈಗ ಬಿಜೆಪಿಯವರು ಮಳೆ ಬಂತು ಎಂದು ಕೊಡೆ ಹಿಡಿದುಕೊಂಡು ಬಂದರೆ ಏನು ಪ್ರಯೋಜನ? ಕಾಮಗಾರಿ ಹೆಸರಲ್ಲಿ ಚೆನ್ನಾಗಿರುವ ರಸ್ತೆಗಳನ್ನು ಕಿತ್ತು ನಾಶ ಮಾಡಿದರು ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು: ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಾಠವನ್ನು ಯಾವುದೇ ಕಾರಣಕ್ಕೆ ಬದಲಿಸಬಾರದು. ಮೊದಲಿನಿಂದಲೂ ನಾರಾಯಣ ಗುರುಗಳನ್ನು ಬದಿಗೆ ಸರಿಸಲು ಯತ್ನಿಸುತ್ತಿದ್ದಾರೆ. ನಾರಾಯಣ ಗುರುಗಳ ಪಾಠ ತೆಗೆದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಆದರೆ ಹಿಂದೆ ಗುರುಗಳಿಗೆ ಸಂಬಂಧಿಸಿದ ಪಾಠ ಬದಲಿಸುವ ಚಿಂತನೆಯಿತ್ತು. ನಾರಾಯಣ ಗುರುಗಳ ಟ್ಯಾಬ್ಲೂ ತೆಗೆದಾಗಲೂ ಸುನಿಲ್ ಕುಮಾರ್ ಏನೂ ಮಾತನಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ಇತಿಹಾಸವನ್ನು ಸರಿಯಾದ ಕ್ರಮದಲ್ಲಿ ಕಲಿಸುವ ಪಠ್ಯಪುಸ್ತಕಗಳು ಬೇಕು. ಭಗತ್ ಸಿಂಗ್ ಬಗ್ಗೆ ಹಿಂದೆ ಏನೆಲ್ಲಾ ಇತ್ತೋ ಅದನ್ನೆಲ್ಲಾ ಉಳಿಸಿಕೊಳ್ಳಬೇಕು. ರಾಮಾಯಣ ಮತ್ತು ಮಹಾಭಾರತದ ಕಥೆಗಳ ಪಾಠವೂ ಬೇಕು. ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಾಠ ತೆಗೆದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಆದರೆ ಅಂಥ ಚಿಂತನೆ ಇತ್ತು ಎಂದು ಶಂಕಿಸಿದರು.

ವಿಧಾನ ಪರಿಷತ್​ನ ಎರಡು ಸ್ಥಾನಗಳಿಗೆ ಹಲವರು ಬೇಡಿಕೆ ಇಟ್ಟಿದ್ದಾರೆ. ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಈ ಸಂಬಂಧ ನಾಳೆ ಮಾತನಾಡುತ್ತೇವೆ. ಈಗಾಗಲೇ ಒಂದು ಸುತ್ತು ಮಾತನಾಡಿದ್ದೇವೆ. ಎಲ್ಲವನ್ನೂ ಚರ್ಚಿಸಿ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ/ ರಾಜ್ಯಸಭೆ ವಿಚಾರಕ್ಕೆ ಪಕ್ಷದಲ್ಲಿ ಪದ್ಧತಿ ಇದೆ. ಸರ್ಕಾರ ಇರಲಿ ಅಥವಾ ಇಲ್ಲದೇ ಇರಲಿ ಹೈಕಮಾಂಡ್ ಹೇಳಿಂದಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ದಕ್ಷಿಣ ಭಾರತದ ವಿವಿಧೆಡೆ ಪ್ರಿಯಾಂಕಾ ಗಾಂಧಿ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೂ ಅವರು ಬಂದರೆ ಸಹಾಯವಾಗುತ್ತದೆ ಎಂದರು.

ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ

ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಅವಾಂತರ ಸೃಷ್ಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಮಗಾರಿಗಳನ್ನು ಆರಂಭಿಸುವ ಮೊದಲು ಬೆಂಗಳೂರಿನ ಗೌರವ ಉಳಿಸಲು ಸರ್ಕಾರ ಗಮನ ಕೊಡಬೇಕಿದೆ. ಬೆಂಗಳೂರಿನಲ್ಲಿ ಈಗ ಬಂಡವಾಳ ಹೂಡಿಕೆಗೆ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಬಿಜೆಪಿಯು ಅಭಿವೃದ್ಧಿಯ ಬಗ್ಗೆ ಗಮನ ಕೊಡದೇ ಕೋಮು ಅಜೆಂಡಾ ಆಧರಿಸಿ ಕೆಲಸ ಮಾಡುತ್ತಿದೆ. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಕ್ಕಾಗಿ, ಬೆಂಗಳೂರು ನಗರಕ್ಕಾಗಿ ಎನು ಮಾಡಿದ್ದಾರೆ? ಈಗ ಬಿಜೆಪಿಯವರು ಮಳೆ ಬಂತು ಎಂದು ಕೊಡೆ ಹಿಡಿದುಕೊಂಡು ಬಂದರೆ ಏನು ಪ್ರಯೋಜನ? ಕಾಮಗಾರಿ ಹೆಸರಲ್ಲಿ ಚೆನ್ನಾಗಿರುವ ರಸ್ತೆಗಳನ್ನು ಕಿತ್ತು ನಾಶ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ಏನೂ ಮಾಡಿಲ್ಲ ಎಂಬ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಎಚ್​ಡಿಕೆ ನಮ್ಮ ಮೇಲೆ ಆರೋಪ ಮಾಡುತ್ತಲೇ ಇರುತ್ತಾರೆ. ಮುಂದಿನ ದಿನಗಳಲ್ಲಿ ನಾವು ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತೇವೆ. ನಾನು ನಗರಾಭಿವೃದ್ಧಿ ಸಚಿವ ಆಗಿದ್ದವನು. ಬೆಂಗಳೂರು ನಗರದ ಪ್ರಾಮುಖ್ಯತೆ ಏನು ಎನ್ನುವುದು ನನಗೆ ಗೊತ್ತು ಎಂದರು.

ಮತ್ತಷ್ಟು ತಾಜಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *