ಹಿಂದಿನ ಸರ್ಕಾರ ಸಮಯ ಹಾಳು ಮಾಡಿದ್ದು ಬಿಟ್ಟರೆ ಇನ್ನೇನೂ ಮಾಡಲಿಲ್ಲ; ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ | PM Modi inaugurated multiple Development projects Uttarakhand today


ಹಿಂದಿನ ಸರ್ಕಾರ ಸಮಯ ಹಾಳು ಮಾಡಿದ್ದು ಬಿಟ್ಟರೆ ಇನ್ನೇನೂ ಮಾಡಲಿಲ್ಲ; ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ

ಡೆಹ್ರಾಡೂನ್​: ಇಂದು ಉತ್ತರಾಖಂಡ್​ನ ಡೆಹ್ರಾಡೂನ್​ಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿ ದೆಹಲಿ-ಡೆಹ್ರಾಡೂನ್​ ಆರ್ಥಿಕ್ ಕಾರಿಡಾರ್ ಸೇರಿ ಒಟ್ಟು 18 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಂದು ಬೆಳಗ್ಗೆ ಉತ್ತರಾಖಂಡ್​ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿಯವರನ್ನು ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್​ ಧಮಿ ಸ್ವಾಗತಿಸಿದ್ದಾರೆ.

ಉದ್ಘಾಟನಾ ಮತ್ತು ಶಂಕು ಸ್ಥಾಪನೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ರ್ಯಾಲಿ ನಡೆಸಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರ ಬರೀ ಸಮಯ ಹಾಳು ಮಾಡಿತು ಎಂದು ವಾಗ್ದಾಳಿ ನಡೆಸಿದರು. ಈ ಶತಮಾನದ ಪ್ರಾರಂಭದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರು ಭಾರತದಲ್ಲಿ ಸಂಪರ್ಕ ಸೌಲಭ್ಯ ಹೆಚ್ಚಿಸಲು ಪ್ರಯತ್ನಿಸದರು. ಆದರೆ ಅವರ ನಂತರ ದೇಶದಲ್ಲಿ ಆಳ್ವಿಕೆಯಲ್ಲಿದ್ದ ಕಾಂಗ್ರೆಸ್​ ಸರ್ಕಾರವಾಗಲಿ, ಉತ್ತರಾಖಂಡ್​​ನಲ್ಲಿ 10 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ಆಗಲೀ ಈ ಬಗ್ಗೆ ಲಕ್ಷ್ಯ ಕೊಡಲಿಲ್ಲ. ಸುಮ್ಮನೆ ಸಮಯ ಹಾಳು ಮಾಡಿತು ಎಂದು ಆರೋಪಿಸಿದರು.  ಹಾಗೇ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆದ ನಷ್ಟವನ್ನು ತುಂಬಲು ದೇಶದಲ್ಲಿ ಸಂಪರ್ಕ  ಮಹಾಯಜ್ಞ ನಡೆಯುತ್ತಿದೆ ಎಂದೂ ಹೇಳಿದರು.

ಕೇಂದ್ರ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಉತ್ತರಾಖಂಡ್​​ನ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಬಿಡುಗಡೆ ಮಾಡಿದೆ. ಇಂದು ಭಾರತ ಆಧುನಿಕ ಮೂಲಸೌಕರ್ಯದಲ್ಲಿ 100 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಹೂಡಿಕೆ ಮಾಡುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಮುನ್ನಡೆಯುತ್ತಿದೆ ಎಂದೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  ಹಾಗೇ, ಉತ್ತರಾಖಂಡ್​​ನ ಕಳೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ ದೇಶದ ಪರ್ವತಗಳು, ಅಲ್ಲಿನ ಸಂಸ್ಕೃತಿಗಳು ನಮ್ಮ ದೇಶಕ್ಕೆ ಭದ್ರತೆ ಒದಗಿಸುವ ಕೋಟೆಗಳಾಗಿವೆ. ಅಂಥ ಪರ್ವತ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅತ್ಯುತ್ತಮ ಜೀವನ ನಡೆಸಲು ಸೌಲಭ್ಯ ಕಲ್ಪಿಸಬೇಕು. ಆದರೆ ದುರದೃಷ್ಟಕ್ಕೆ ಈ ಹಿಂದಿನ ಸರ್ಕಾರ ಆ ಬಗ್ಗೆ ಗಮನಹರಿಸಲೇ ಇಲ್ಲ ಎಂದು ಹೇಳಿದರು. ಉತ್ತರಾಖಂಡ್​​ನಲ್ಲಿ 2007ರಿಂದ 2014ರವರೆಗೆ ಆಗಿನ ಕೇಂದ್ರ ಸರ್ಕಾರ 600 ಕೋಟಿ ರೂಪಾಯಿ ವೆಚ್ಚದಲ್ಲಿ 288 ಕಿಮೀ ದೂರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತು. ಆದರೆ ಬಳಿಕ ಬಂದ ನಮ್ಮ ಬಿಜೆಪಿ ಸರ್ಕಾರ ಏಳು ವರ್ಷಗಳಲ್ಲಿ ಇಲ್ಲಿ 12 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 2000 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದೆ ಎಂದು ಹೇಳಿದರು.  ಉತ್ತರಾಖಂಡ್​ನಲ್ಲಿ 2022ರ ಪ್ರಾರಂಭದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭೇಟಿ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಅತ್ಯಂತ ಮಹತ್ವದ್ದಾಗಿದೆ.

TV9 Kannada


Leave a Reply

Your email address will not be published. Required fields are marked *