ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ.. | Kichcha Sudeep Vs Ajay Devgn: This is how controversy about Hindi and National language controversy started


ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..

ಅಜಯ್ ದೇವಗನ್, ಕಿಚ್ಚ ಸುದೀಪ್

ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಬಗ್ಗೆ ಈಗ ದೇಶಾದ್ಯಂತ ಚರ್ಚೆ ಶುರುವಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಪ್ರಾಬಲ್ಯವಿದೆ ಎಂದ ಮಾತ್ರಕ್ಕೆ ಅದನ್ನು ರಾಷ್ಟ್ರ ಭಾಷೆ (National Language) ಎನ್ನಲು ಸಾಧ್ಯವಿಲ್ಲ. ಆದರೆ ಅದೇ ನಮ್ಮ ರಾಷ್ಟ್ರ ಭಾಷೆ ಎಂದು ಅಜಯ್​ ದೇವಗನ್​ ಬಿಂಬಿಸುತ್ತಿದ್ದಾರೆ. ಆ ವಾದಕ್ಕೆ ದಕ್ಷಿಣ ಭಾರತದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಕಿಚ್ಚ ಸುದೀಪ್​ (Kichcha Sudeep) ಕೂಡ ‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ಎಂಬುದನ್ನು ಒತ್ತಿ ಹೇಳಿದರು. ಅವರ ಹೇಳಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಇದೇ ವಿಚಾರವಾಗಿ ಈಗ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತುತ್ತಿದ್ದಾರೆ. ಸತೀಶ್​ ನೀನಾಸಂ, ನಟಿ ರಮ್ಯಾ ಸೇರಿದಂತೆ ಹಲವರು ಸುದೀಪ್​ ಪರವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಅಜಯ್​ ದೇವಗನ್​ (Ajay Devgn) ಅವರ ಮಾತುಗಳಿಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಸುದೀಪ್ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದು ಎಲ್ಲಿ? ಒಟ್ಟಾರೆಯಾಗಿ ಈ ಕಾಂಟ್ರವರ್ಸಿ ಹೇಗೆ ಶುರುವಾಯ್ತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಅದು ರಾಮ್​ ಗೋಪಾಲ್​ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಐ ಆ್ಯಮ್​ ಆರ್​’ ಸಿನಿಮಾದ ಟೈಟಲ್ ಮತ್ತು ಫಸ್ಟ್​ಲುಕ್​ ಲಾಂಚ್​ ಕಾರ್ಯಕ್ರಮ. ಅದಕ್ಕೆ ಕಿಚ್ಚ ಸುದೀಪ್​ ಅವರು ಮುಖ್ಯ ಅಥಿತಿ ಆಗಿದ್ದರು. ಆ ವೇದಿಕೆಯಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಮಾತು ಪ್ರಸ್ತಾಪ ಆಯಿತು. ಅದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್​ ಅವರು, ‘ಕನ್ನಡ ಚಿತ್ರರಂಗದ ಒಂದು ಸಿನಿಮಾವನ್ನು ಪ್ಯಾನ್​ ಇಂಡಿಯಾ ಚಿತ್ರ ಅಂತ ಹೇಳಿದ್ದೀರಿ. ಅದಕ್ಕೆ ಒಂದು ಕರೆಕ್ಷನ್​ ಇರಲಿ. ಯಾಕೆಂದರೆ ಈಗ ಹಿಂದಿ ರಾಷ್ಟ್ರ ಭಾಷೆ ಅಲ್ಲ. ಹಿಂದಿಯವರು ನಿಜವಾಗಿಯೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಚಿತ್ರವನ್ನು ತಮಿಳು, ತೆಲುಗಿಗೆ ಡಬ್​ ಮಾಡಿ ಒದ್ದಾಡುತ್ತಿದ್ದಾರೆ. ಆಗ್ತಾ ಇಲ್ಲ’ ಎಂದು ಸುದೀಪ್​ ಹೇಳಿದ್ದರು.

ಸುದೀಪ್​ ಅವರ ಮಾತುಗಳು ಹಿಂದಿ ಸೆಲೆಬ್ರಿಟಿಗಳ ಕಿವಿ ತಲುಪುವ ಹೊತ್ತಿಗೆ ಬೇರೆಯದೇ ಸ್ವರೂಪ ಪಡೆದುಕೊಂಡಿತು. ನಟ ಅಜಯ್​ ದೇವಗನ್​ ಅವರು ಒಂದು ಲಾಜಿಕ್ ಇಲ್ಲದ ಪ್ರಶ್ನೆಯನ್ನು ಎತ್ತಿದರು. ‘ನನ್ನ ಸಹೋದರ ಕಿಚ್ಚ ಸುದೀಪ್​ ಅವರೇ.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ನೀವೇಕೆ ರಿಲೀಸ್​ ಮಾಡುತ್ತೀರಿ? ಅಂದು, ಇಂದು ಎಂದೆಂದಿಗೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ’ ಎಂದು ಅಜಯ್​ ದೇವಗನ್​ ಟ್ವೀಟ್​ ಮಾಡಿದರು. ಅವರ ಈ ಮಾತಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.

ದಕ್ಷಿಣದ ಭಾಷೆಗಳ ಸಿನಿಮಾವನ್ನು ಹಿಂದಿಯಲ್ಲಿ ಡಬ್​ ಮಾಡುವುದು ಹಾಗೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದು ಎರಡು ಪ್ರತ್ಯೇಕವಾದ ವಿಚಾರ. ಅದನ್ನು ಅಜಯ್​ ದೇವಗನ್​ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅನೇಕರು ಕಿವಿ ಹಿಂಡುತ್ತಿದ್ದಾರೆ.

TV9 Kannada


Leave a Reply

Your email address will not be published.