ಬೆಂಗಳೂರು: ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಅಂತಾ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜಿಂದಾಲ್​ ಕಂಪನಿಗೆ ಸದ್ಯಕ್ಕೆ ಭೂಮಿ ನೀಡದಿರಲು ನಿನ್ನೆಯ ಸಂಪುಟ ಸಭೆ ನಿರ್ಧರಿಸಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ.. ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ. ಆದರೆ, ನಷ್ಟ ಜಾಸ್ತಿಯೇ ಆಗಿದೆ.

ಜಿಂದಾಲ್‌ಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಭೂಮಿ ನೀಡಲಾಗಿತ್ತು. ಲೀಸ್‌ ಅವಧಿ ಮುಗಿದಿದ್ದರಿಂದ ಕ್ರಯಪತ್ರ ಮಾಡಿಕೊಡಬೇಕಾಗಿತ್ತು. ಅಷ್ಟನ್ನು ಮಾತ್ರ ಮಾಡಲು ಮುಂದಾಗಿದ್ದ ನನ್ನ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಸಲ್ಲದ ಆರೋಪ ಮಾಡಿದ್ದರು. ಆದರೆ ಈಗ? ಅವರು ಅಂದು ನನ್ನ ಮೇಲೆ ಮಾಡಿದ ಆರೋಪಗಳನ್ನೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳುವಂಥಾಗಿದೆ.

ಬಿಜೆಪಿ ಸಂಸ್ಕೃತಿಯೇ ಅವರಿಗೆ ತಿರುಗುಬಾಣವಾಗಿದೆ
ವಿರೋಧಕ್ಕಾಗಿ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ ‘ಸಂಸ್ಕೃತಿ’. ಬಿಜೆಪಿ ಪಾಲಿಸಿಕೊಂಡು ಬಂದ ಈ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ. ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ ಎಂದು ಗುಡುಗಿದ್ದಾರೆ.

The post ‘ಹಿಂದೆ ಮಾಡಿದ ಪಾಪದ ಫಲವನ್ನ ಬಿಜೆಪಿ ಇಂದು ಅನುಭವಿಸುತ್ತಿದೆ’ appeared first on News First Kannada.

Source: newsfirstlive.com

Source link