ಹಿಜಾಬ್‌ಗೂ ಈ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ, ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ | This seems hijab not connected to this murder says araga jnanendra


ಹಿಜಾಬ್‌ಗೂ ಈ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ,  ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಪ್ರತಿಕ್ರಿಯೆ ನೀಡಿದ್ದು, ಹಿಜಾಬ್‌ಗೂ ಈ ಕೊಲೆಗೂ(Murder) ಲಿಂಕ್ ಇದೆ ಎಂದು ಅನಿಸುತ್ತಿಲ್ಲ. ಆ ಬಗ್ಗೆಯೂ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ 9 ರಿಂದ 9.15ರ ಸುಮಾರಿಗೆ ಬಜರಂಗದಳ ಕಾರ್ಯಕರ್ತನ ಕೊಲೆಯಾಗಿದೆ. ಮೃತನ ಕುಟುಂಬಸ್ಥರ(Family) ಜತೆ ಮಾತಾಡಿ ಸಾಂತ್ವನ ಹೇಳಿದ್ದೇನೆ. ಮೃತನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕುಟುಂಬಸ್ಥರು ಕೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದೇನೆ. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಮಾಹಿತಿ ಪಡೆದಿದ್ದೇನೆ. ಕೊಲೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಹರ್ಷನನ್ನು ಕೊಲೆ ಮಾಡಿದವರು ಯಾರೆಂದು ಗೊತ್ತಾಗಿದೆ. 4 ರಿಂದ 5 ಜನ ಕೊಲೆ ಮಾಡಿರುವುದಾಗಿ ಮಾಹಿತಿ ಇದೆ. ಆರೋಪಿಗಳು ಯಾರು ಎಂದು ಗೊತ್ತಾಗಿರುವುದು ಸಮಾಧಾನಕರ ಸಂಗತಿ. ಈ ಪ್ರಕರಣದಲ್ಲಿ ನಾವು ಏನೆಂದು ಸ್ಪಷ್ಟ ಸಂದೇಶ ಕೊಡ್ತೇವೆ. ದಯವಿಟ್ಟು ಎಲ್ಲರೂ ಶಾಂತಿಯುತವಾಗಿ ಇರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಕುರಿತು ಶಿವಮೊಗ್ಗದ ಜನರು ಸಹಕರಿಸಬೇಕು. ಕೊಲೆಗೆ ಸರಿಯಾದ ಕಾರಣ ತನಿಖೆಯಿಂದ ಹೊರಬರುತ್ತದೆ. ಕೊಲೆಯಾದ ಯುವಕನ ಮೇಲೆ ಒಂದೆರಡು ಪ್ರಕರಣಗಳಿವೆ. ಒಂದೆರಡು ಪ್ರಕರಣಗಳು ಇರುವ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದೆ. ಮೃತ ಹರ್ಷ ಹಿಂದೂ ಕಾರ್ಯಕರ್ತನಾಗಿದ್ದ. ಸದ್ಯ ಶಿವಮೊಗ್ಗದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಆದರೆ ಜನರು ಆಕ್ರೋಶಭರಿತರಾಗಬಾರದು ಎದು ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಘಟನೆಯನ್ನು ಖಂಡಿಸಿ ನಿನ್ನೆ ಕಲ್ಲು ತೂರಾಟ ನಡೆದಿದೆ.  ಒಂದರೆಡು ಬೈಕ್‌ಗೆ ಬೆಂಕಿ ಹಚ್ಚಿರುವ ಮಾಹಿತಿ ಇದೆ. ಇದರ ಹಿಂದೆ ಯಾವ ಸಂಘಟನೆ ಇದೆ ಎಂಬ ಮಾಹಿತಿ ಇಲ್ಲ. ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಿಎಂ ಜತೆ ಚರ್ಚಿಸುವೆ. ಘಟನೆಯ ಬಗ್ಗೆ ಸಿಎಂ ಬೊಮ್ಮಾಯಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ಸಿಎಂ ಕೂಡ ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಗಾಂಜಾ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಮಾಹಿತಿ

ಗಾಂಜಾ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಮಾಹಿತಿ ಹಿನ್ನೆಲೆ ನಮ್ಮ ಪೊಲೀಸರು ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಜಪ್ತಿ ಮಾಡುವ ಕೆಲಸ ನಮ್ಮ ಪೊಲೀಸರು ಮಾಡಿದ್ದಾರೆ. ಆದರೂ ಇಂತಹ ಒಂದು ದುರ್ಘಟನೆ ನಡೆದುಹೋಗಿದೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *