ತಖೀಯಾ ಧರಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ
ದಾವಣಗೆರೆ: ಹಿಜಾಬ್ ಜತೆ ಇದೀಗ ಮತ್ತೊಂದು ಹೊಸ ವಿವಾದ ಶುರುವಾಗಿದೆ. ರಾಜ್ಯಾದ್ಯಂತ ಹಿಜಾಬ್- ಕೇಸರಿ ಶಾಲಿನ ವಿವಾದ ಈ ಮೊದಲು ಆರಂಭವಾಗಿತ್ತು. ಇದೀಗ ಅದರ ಜತೆ ಮತ್ತೊಂದು ಸಂಘರ್ಷ ಶುರುವಾದಂತಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಹೊಸದೊಂದು ಘಟನೆ ನಡೆದಿದೆ. ತಲೆಗೆ ಬಿಳಿ ಟೊಪ್ಪಿಗೆ (ತಖೀಯಾ) ಧರಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ನಮಾಜ್ ಸಂದರ್ಭದಲ್ಲಿ ಮುಸ್ಲಿಮರು ಧರಿಸುವ ಬಿಳಿ ಟೊಪ್ಪಿಗೆ ಧರಿಸಿ ಬಂದಿದ್ದಾರೆ.
ಟೊಪ್ಪಿಗೆ ಧರಿಸಿಯೇ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಿದ್ದಾರೆ. ಹೊಸ ಬಗೆಯ ಸಂಘರ್ಷಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ನಿನ್ನೆವರೆಗೂ ಬಿಳಿ ಟೊಪ್ಪಿಗೆ ಧರಿಸಿ ಬಾರದ ವಿದ್ಯಾರ್ಥಿಗಳು, ಇಂದು ಬಿಳಿ ಟೊಪ್ಪಿಗೆ ಧರಿಸಿ ಶಾಲೆಗೆ ಬಂದಿದ್ದಾರೆ. ಹಿಜಾಬ್-ಬಿಳಿ ಟೊಪ್ಪಿಗೆ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯಿಂದ ಹೊರಗೆ ಕೂರಿಸಿದ್ದಾರೆ. ಸ್ಥಳಕ್ಕೆ ಹೊನ್ನಾಳಿ ತಹಶಿಲ್ದಾರ ಬಸನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೋಪಿ ಹಾಕಿಕೊಂಡೆ ಶಾಲೆಗೆ ಬರುತ್ತೇವೆ ಎಂದು ವಿದ್ಯಾರ್ಥಿಗಳು ಈ ವೇಳೆ ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ.