ಹಿಜಾಬ್ ಕೇಸರಿ ಶಾಲು ವಿವಾದ: ಒಂದು ಕ್ಲಾಸ್ಗೆ ಒಬ್ಬಳೇ ವಿದ್ಯಾರ್ಥಿನಿ, ಶಾಲೆಗೆ ಬಾರದ ಮಕ್ಕಳು | Hijab kesari shawl row Only one student present in entire class in bagalkot


ಹಿಜಾಬ್ ಕೇಸರಿ ಶಾಲು ವಿವಾದ: ಒಂದು ಕ್ಲಾಸ್ಗೆ ಒಬ್ಬಳೇ ವಿದ್ಯಾರ್ಥಿನಿ, ಶಾಲೆಗೆ ಬಾರದ ಮಕ್ಕಳು

ಹಿಜಾಬ್ ಕೇಸರಿ ಶಾಲು ವಿವಾದ: ಒಂದು ಕ್ಲಾಸ್ಗೆ ಒಬ್ಬಳೇ ವಿದ್ಯಾರ್ಥಿನಿ, ಶಾಲೆಗೆ ಬಾರದ ಮಕ್ಕಳು

ಬಾಗಲಕೋಟೆ: ಹಿಜಾಬ್ ಕೇಸರಿ ಶಾಲು ವಿವಾದ ಶುರುವಾಗಿ ರಾಜ್ಯಾದ್ಯಂತ ಅಲ್ಲಲ್ಲಿ ಗಲಾಟೆಗಳು ನಡೆದು ಕೆಲ ಕಾಲೇಜುಗಳಲ್ಲಿ ರಣಾಂಗಣವಾದ ಸನ್ನಿವೇಶ ನಡೆದು ಹೋಗಿದೆ‌. ಹಿಜಾಬ್ ಕೇಸರಿ ಶಾಲು ವಿವಾದ ಈಗ ಕೋರ್ಟ್ ನಲ್ಲಿದೆ. ಇನ್ನು ಈ ವಿವಾದ ರಾಜಕೀಯ ಪಕ್ಷಗಳಿಗೆ ಏಟು ಎದುರೇಟು, ವಾಗ್ದಾಳಿಗಳಿಗೆ ಆಹಾರವಾಗಿದೆ‌. ಆದರೆ ಈ ಮಧ್ಯೆ ಈ ಹಿಜಾಬ್ ಕೇಸರಿ ವಿವಾದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ‌. ಹಿಜಾಬ್ ಕೇಸರಿ ವಿವಾದ ಶಾಲೆಯಲ್ಲಿ ಹಿಜಾಬ್ ಬಗ್ಗೆ ಇರುವ ನಿಯಮಗಳಿಂದ ಬೇಸತ್ತ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಬಾಗಲಕೊಟೆಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಂಡು ಬಂದ ಒಂದು ದೃಶ್ಯವೇ ಸಾಕ್ಷಿಯಾಗಿದೆ.

ಇಡೀ ಕ್ಲಾಸ್ಗೆ ಒಬ್ಬಳೇ ವಿದ್ಯಾರ್ಥಿನಿ ಪುಲ್ ಕ್ಲಾಸ್ ಖಾಲಿ
ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಶಾಲೆಯಲ್ಲಿ ಸಮವಸ್ತ್ರ ಹೊರತುಪಡಿಸಿ ಯಾವುದೇ ಅನ್ಯ ವಸ್ತ್ರ ಧರಿಸಬಾರದು ಅಂತ ಇದೆ‌. ಈ ಹಿನ್ನೆಲೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಹೊರತುಪಡಿಸಿ ಹಿಜಾಬ್, ಶಾಲು ಧರಿಸೋದಕ್ಕೆ ಅವಕಾಶ ನೀಡಿಲ್ಲ. ಇದರಿಂದ ಹಿಜಾಬ್ ಧರಿಸಿಕೊಂಡು ಬರುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯರು ಶಾಲಾ ಕೊಠಡಿಗೆ ಬಂದು ಅದನ್ನು ಒಂದು ಪ್ರತ್ಯೇಕ ಕೊಠಡಿಯಲ್ಲಿ ತೆಗೆದು ಕ್ಲಾಸ್ ಗೆ ಹೋಗುತ್ತಿದ್ದಾರೆ. ಆದರೆ ಬಾಗಲಕೋಟೆ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಉರ್ದು ವಿಭಾಗದ ಹತ್ತನೇ ತರಗತಿಗೆ ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ತರಗತಿಗೆ ಬರುತ್ತಿಲ್ಲ.
Hijab

ಇಂದು ಇಡೀ ಕ್ಲಾಸ್ ನಲ್ಲಿ ಒಬ್ಬಳೇ ಒಬ್ಬಳು ವಿದ್ಯಾರ್ಥಿನಿ ಅಟೆಂಡ್ ಆಗಿದ್ದು ಆ ಏಕೈಕ ವಿದ್ಯಾರ್ಥಿನಿಗೆ ಶಿಕ್ಷಕ ಶಿಕ್ಷಕಿಯರು ಪಾಠ ಮಾಡುತ್ತಿದ್ದಾರೆ‌. ಒಟ್ಟು 19 ಜನ ವಿದ್ಯಾರ್ಥಿನಿಯರಿದ್ದು ಒಬ್ಬಳನ್ನು ಬಿಟ್ಟು ಎಲ್ಲರೂ ಗೈರಾಗಿದ್ದಾರೆ‌. ಮನೆಯಿಂದ ಹಿಜಾಬ್ ಧರಿಸಿಕೊಂಡು ಬರೋದು ಪುನಃ ಶಾಲೆಯಲ್ಲಿ ಅದನ್ನು ತೆಗೆಯೋದು ಈ ಎಲ್ಲ ಮುಜುಗರ ಯಾಕೆ ಅಂತ ವಿದ್ಯಾರ್ಥಿನಿಯರು ಶಾಲೆಗೆ ಹೋಗದೆ ಇರೋದೆ ಒಳ್ಳೆಯದು ಅಂತ ವಿದ್ಯಾರ್ಥಿನಿಯರು, ಪೋಷಕರು ನಿರ್ಧರಿಸಿದ್ದಾರೆ‌ ಎಂದು ಮಾಹಿತಿ ತಿಳಿದು ಬಂದಿದೆ. ಇನ್ನು ಶಾಲೆಗೆ ಬಂದ ಏಕೈಕ ವಿದ್ಯಾರ್ಥಿನಿ ಜಬೀನ್ ಮಕಾಂದಾರ, “ತರಗತಿಗೆ ನಾನು ಒಬ್ಬಳೇ ಬಂದಿದ್ದೇನೆ, ನನ್ನ ಸ್ನೇಹಿತೆಯರು ಯಾರೂ ಬಂದಿಲ್ಲ. ಇದು ಬೇಸರ ತರಿಸಿದೆ‌. ಯಾವುದೇ ಭಯ ಬೇಡ ಕ್ಲಾಸ್ ಗೆ ಬನ್ನಿ” ಅಂತ ಆಕೆಯ ಸಹಪಾಠಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಉಳಿದಂತೆ 8,9 ನೇ ತರಗತಿಗೂ ಕೂಡ ಪ್ರತಿ ಶತ ನೂರರಷ್ಟು ಉರ್ದು ಮಾದ್ಯಮ ವಿದ್ಯಾರ್ಥಿನಿಯರು ಬರುತ್ತಿಲ್ಲ. ಕೆಲವರು ಹಿಜಾಬ್ ಧರಿಸಿಕೊಂಡು ಶಾಲೆವರೆಗೂ ಬಂದು ನಂತರ ಅದನ್ನು ತೆಗೆದು ಕ್ಲಾಸ್ ಗೆ ಹೋದರೆ ಕೆಲವರು ಶಾಲೆ ಕಡೆ ತಿರುಗಿ ನೋಡುತ್ತಿಲ್ಲ. ಪ್ರೌಢಶಾಲೆಗೆ ಭೇಟಿ ನೀಡಿದ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಶಾಲೆಯನ್ನು ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಜೊತೆ ಮಾತಾಡಿ ನಿಮ್ಮ ಸಹಪಾಠಿ ಸ್ನೇಹಿತರನ್ನು ಎಲ್ಲರನ್ನೂ ಶಾಲೆಗೆ ಕರೆದುಕೊಂಡು ಬನ್ನಿ, ಯಾರೂ ಭಯಪಡುವ ಅವಶ್ಯಕತೆಯಿಲ್ಲ ಎಂದು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವುದರ ಜೊತೆಗೆ ಮನವಿ ಮಾಡಿದರು.

ಒಟ್ಟಾರೆ ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ಕೇಸರಿ ಶಾಲು ವಿವಾದ ಮುಗಿಯದಾಗಿದ್ದು ಮಕ್ಕಳ ವಿಧ್ಯಾಭ್ಯಾಸಕ್ಕೆ ಕಂಠಕವಾಗುತ್ತಿರೋದಂತೂ ನಿಜ. ಆದಷ್ಟು ಬೇಗ ಈ ವಿವಾದಕ್ಕೆ ಅಂತ್ಯ ಹಾಡಿ ಮರಳಿ ಶಾಲೆ-ಕಾಲೇಜುಗಳಲ್ಲಿ ಸುಂದರ ವಾತಾವರಣ ನಿರ್ಮಾಣ ಮಾಡಬೇಕಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

TV9 Kannada


Leave a Reply

Your email address will not be published. Required fields are marked *