ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ: ಉಡುಪಿಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರ ಶಾಂತಿ ಸಭೆ | MLA Raghupati Bhat after meeting with various Organizations amid Hijab Kesari Row in Udupi


ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ: ಉಡುಪಿಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರ ಶಾಂತಿ ಸಭೆ

ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು

ಉಡುಪಿ: ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಭಾನುವಾರ (ಫೆಬ್ರವರಿ 13) ಉಡುಪಿಯಲ್ಲಿ ಎಲ್ಲ ಸಂಘಟನೆಗಳ ಮುಖಂಡರ ಶಾಂತಿ ಸಭೆ ನಡೆಸಲಾಗಿದೆ. ಶಾಂತಿ ಸಭೆ ಬಳಿಕ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿದ್ದಾರೆ. ಸಭೆಗೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬೆಂಬಲಿಸಿದ್ದ ಸಿಎಫ್​ಐ ಗೈರಾಗಿದೆ. ಎಲ್ಲಾ ಸಂಘಟನೆ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೋರ್ಟ್‌ ತೀರ್ಪಿನವರೆಗೆ ಅಹಿತಕರ ಘಟನೆ ಆಗದಂತೆ ಮನವಿ ಮಾಡಲಾಗಿದೆ. ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಕೋರ್ಟ್ ಆದೇಶ ಅನ್ವಯ ಆಗಲಿದೆ. ಯಾರೂ ಹಿಜಾಬ್, ಕೇಸರಿ ಶಾಲು ಧರಿಸದಂತೆ ಹೇಳಿದ್ದೇವೆ. ಕೋರ್ಟ್ ಮಧ್ಯಂತರ ಆದೇಶ ಮೀರಲ್ಲ ಎಂದು ಹೇಳಿದ್ದಾರೆ ಎಂದು ಶಾಂತಿ ಸಭೆ ಬಳಿಕ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಎಲ್ಲರೂ ಶಾಂತಿಯನ್ನು ಬಯಸುವ ಜನರಿದ್ದಾರೆ. ಆಗಬಾರದ್ದು ಆಗಿಹೋಗಿದೆ, ಮುಂದೆ ಶಾಂತಿಯುತವಾಗಿರಲಿ. ಒಳ್ಳೆಯ ರೀತಿಯಲ್ಲಿ ಅಂತ್ಯವಾಗಲಿ ಎಂದು ಭಾವಿಸುತ್ತೇವೆ. ಉಡುಪಿ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಹಾಳಾಗಬಾರದು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸಮ್ಮತಿಸಿದ್ದಾರೆ. ಹಿಜಾಬ್​ ರಹಿತವಾಗಿ ಶಾಲೆಗೆ ಕಳಿಸುವುದು ಪೋಷಕರಿಗೆ ಬಿಟ್ಟದ್ದು. ಎಲ್ಲಾ ಮಕ್ಕಳು ಶಾಲೆಗೆ ಬರಬೇಕೆನ್ನುವುದು ನಮ್ಮ ಆಶಯ. ಶಾಲಾ ಕಾಲೇಜು ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಸಹಕರಿಸಲಿ. ಮಕ್ಕಳು ಸಾಂವಿಧಾನಿಕ ಹಕ್ಕು ಕೇಳುತ್ತಿದ್ದಾರೆ. ಹೈಕೋರ್ಟ್​ನಿಂದ ಒಳ್ಳೆಯ ತೀರ್ಪು ಬರುವ ವಿಶ್ವಾಸವಿದೆ ಎಂದು ಶಾಂತಿ ಸಭೆ ನಂತರ ಎಸ್​ಡಿಪಿಐ ಜಿಲ್ಲಾಧ್ಯಕ್ಷ ನಜೀರ್​ ಹೇಳಿಕೆ ನೀಡಿದ್ದಾರೆ.

ಕೋರ್ಟ್​ ಆದೇಶ ಪಾಲಿಸಿ ನಾಳೆಯಿಂದ ಹೈಸ್ಕೂಲ್ ಪುನಾರಂಭ ಮಾಡುತ್ತೇವೆ. ಹೈಕೋರ್ಟ್ ಆದೇಶ ಪಾಲಿಸುವುದಾಗಿ ಎಲ್ಲರೂ ಸಮ್ಮತಿಸಿದ್ದಾರೆ. ಶಾಲೆಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ನೀತಿ ಜಾರಿಗೆ ತರುತ್ತೇವೆ. ತಾಲೂಕು ಕಚೇರಿಯಲ್ಲಿ ನಡೆದ ಶಾಂತಿ ಸಭೆ ಯಶಸ್ವಿಯಾಗಿದೆ. ಸಭೆಗೆ ಸಿಎಫ್​ಐ ಮುಖಂಡರಿಗೆ ಆಹ್ವಾನಿಸಿದ್ದರೂ ಗೈರಾಗಿದ್ದರು ಎಂದು ಸರ್ವಧರ್ಮ, ಸರ್ವಪಕ್ಷದ ಸಭೆ ನಂತರ ಉಡುಪಿ ತಹಶೀಲ್ದಾರ್​ ಪ್ರದೀಪ್ ಹುರ್ಡೇಕರ್​ ಹೇಳಿದ್ದಾರೆ.

ಉಡುಪಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಉಡುಪಿ ತಹಶೀಲ್ದಾರ್ ಕಚೇರಿಯಲ್ಲಿ ಮಹತ್ವದ ಶಾಂತಿ ಸಭೆ ನಡೆಸಲಾಗಿದೆ. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಹಿಂದೂ ಜಾಗರಣ ವೇದಿಕೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಎಸ್‌ಡಿಪಿಐ ಮುಖಂಡರು, ಸಹಬಾಳ್ವೆ ಸಂಘಟನೆ ಮುಖಂಡರು, ಕ್ರೈಸ್ತ ಧರ್ಮಗುರುಗಳು, ಉಡುಪಿ ಕೃಷ್ಣಮಠದ ಪ್ರತಿನಿಧಿಗಳು, ಕಾಂಗ್ರೆಸ್‌, ಎಬಿವಿಪಿ ಮುಖಂಡರು, ಜಿಲ್ಲಾ ಪೊಲೀಸರು ಭಾಗಿ ಆಗಿದ್ದಾರೆ.

TV9 Kannada


Leave a Reply

Your email address will not be published.