ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ; ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರ ಪಥಸಂಚಲನ | Hijab Kesari Controversy Hijab Row in Karnataka Police Parade in many places of State to create awareness


ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆ; ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರ ಪಥಸಂಚಲನ

ಪೊಲೀಸರ ಪಥಸಂಚಲನ

ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಅಲ್ಲಿಯವರೆಗೂ ಯಾರಿಗೂ ನೋವುಂಟು ಮಾಡಬಾರದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗ್ರಾಮ ವೆಂಕಟಗಿರಿಕೋಟೆಯಲ್ಲಿ ಸಚಿವ ಡಾ. ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಹಿಜಾಬ್ ವಿವಾದ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಆಗಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಲು ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೈಕೋರ್ಟ್ ಸೂಚನೆಯನ್ನು ನಾವು ಪಾಲಿಸುತ್ತೇವೆ. ಹಿಜಾಬ್ ವಿವಾದವನ್ನು ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಎತ್ತಿಕಟ್ಟಿ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದೆ ಎಂದು ಚಿತ್ರದುರ್ಗದಲ್ಲಿ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇತ್ತ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿಯ 6 ಯುವತಿಯರು ಸಾಮಾಜಿಕ‌ ಜಾಲತಾಣ ಫಾಲೋ ಮಾಡುತ್ತಿದ್ದ‌ ವಿಚಾರವಾಗಿ ರಾಮನಗರದಲ್ಲಿ‌ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ​ ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ವ ನಿರ್ಧಾರಿತ ಯೋಜನೆ ಆಗಿದ್ದರೆ ಕ್ರಮ ಕೈಗೊಳ್ಳಲಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರದಿಂದ ಅಮಾಯಕ ಮಕ್ಕಳಲ್ಲಿ ದ್ವೇಷ ಭಾವನೆ ಉಂಟು ಮಾಡ್ತಿದ್ದಾರೆ. ಕೆಲವು ಸಂಘಟನೆಗಳು ದ್ವೇಷ ಭಾವನೆ ಉಂಟು ಮಾಡ್ತಿವೆ. ತಮ್ಮ ಸಂಘಟನೆಗಳನ್ನು ಬಲ ಮಾಡಿಕೊಳ್ಳಲು ಮಕ್ಕಳನ್ನ ದುರ್ಬಳಕೆ ಮಾಡ್ತಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ರೆ ಹಿಜಾಬ್ ವಿಚಾರ ದೊಡ್ಡದಾಗ್ತಿರಲಿಲ್ಲ ಎಂದು ಚಿಂತಾಮಣಿ ನಗರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರಿಂದ ಪಥಸಂಚಲನ

ಹುಬ್ಬಳ್ಳಿ: ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ ಹಿನ್ನಲೆ ಹುಬ್ಬಳ್ಳಿಯ ಪೊಲೀಸರಿಂದ ಪಥಸಂಚಲನ ನಡೆಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ನಾಗರಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ ಮಾಡಲಾಗಿದೆ. ಉತ್ತರ ಸಂಚಾರ ವಿಭಾಗದ ಎಸಿಪಿ ವಿನೋದ್ ಕುಮಾರ ಮುಕ್ತೆದಾರ ನೇತೃತ್ವದಲ್ಲಿ ಎರಡು ಮಾರ್ಗವಾಗಿ ಪಥ ಸಂಚಲನ ಮಾಡಲಾಗಿದೆ. ದೇವಾಂಗಪೇಟೆ, ಸಿಲ್ವರ್ ಪಾರ್ಕ್, ಮಸೂತಿ ಓಣಿ, ಗೊಪ್ಪನಕೊಪ್ಪ, ರಮೇಶಭವನ, ಸರ್ವೋದಯ ಸರ್ಕಲ್ ವರೆಗೆ ಒಂದು ಮಾರ್ಗವಾಗಿ ಹಾಗೂ ಮತ್ತೊಂದು ಮಾರ್ಗವಾಗಿ ಗಿರಣಿಚಾಳ, ಗವಿ ಓಣಿ, ಕೌಲಪೇಟೆ, ಡಾಕಪ್ಪಾ ಸರ್ಕಲ್, ಮುಲ್ಲಾ ಮಸೂತಿ ಓಣಿ, ಕಾಳಮ್ಮನ ಅಗಸಿ ಮಾರ್ಗದಲ್ಲಿ ಪಥಸಂಚಲನ ಮಾಡಲಾಗಿದೆ.

ನೆಲಮಂಗಲ: ಹಿಜಾಬ್​ ಹಾಗೂ ಕೇಸರಿ ಶಾಲು ವಿವಾದ ಪ್ರಕರಣ ಹಿನ್ನೆಲೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸರು ಪರೇಡ್ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸೋಮವಾರದಿಂದ ಶಾಲೆಗಳು ತೆರೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನೆಲಮಂಗಲ ನಗರದ ಎಲ್ಲಾ ಶಾಲಾ ಕಾಲೇಜು ಮುಂಭಾಗದ ರಸ್ತೆ ಹಾಗೂ ಜನಸಂದಣಿ ಇರುವ ಕಡೆ ಪರೇಡ್ ಮಾಡಲಾಗಿದ್ದು, ಈ ವೇಳೆ ನೆಲಮಂಗಲ ನೆಲಮಂಗಲ ಟೌನ್, ಗ್ರಾಮಾಂತರ ಪೊಲೀಸರು, ಗಸ್ತು ನಡೆಸಿದ್ದಾರೆ.

TV9 Kannada


Leave a Reply

Your email address will not be published.