ಹಿಜಾಬ್ ಧರಿಸಿದ್ದಕ್ಕೆ ತರಗತಿಗಳಿಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿನಿಯರು, ಮುಸ್ಲಿಮೇತರ ಸಹಪಾಠಿಗಳನ್ನು ಗೇಲಿ ಮಾಡಿದರು! | Denied permission to enter college premises for wearing hijab girls shout slogans against non Muslim students ARB


ಇದು ಅತಿಯಾಯ್ತು. ಮಕ್ಕಳ ಕೈಲಿ ಘೋಷಣೆ ಕೂಗಿಸುತ್ತಾ ಅವರಲ್ಲಿ ಬಂಡಾಯ ಪ್ರವೃತ್ತಿ ಬೆಳೆಸುತ್ತಿರುವ ಪೋಷಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಚಿತ್ರದುರ್ಗದ ಸರಕಾರಿ ಬಾಲಕಿಯರ ಪದವಿ-ಪೂರ್ವ ಕಾಲೇಜು ಬಳಿ ನಡೆಯುತ್ತಿರುವ ಸನ್ನಿವೇಶವನ್ನು ಗಮನಿಸಿ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶ ಮತ್ತು ತಮ್ಮ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರ ಸಲಹೆ ಹೊರತಾಗಿಯೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಅವರನ್ನು ಕಾಲೇಜಿನೊಳಗೆ ಸೇರಿಸಿಲ್ಲ ಅನ್ನೋದು ವಿದಿತ. ಕಾಲೇಜಿನವರೆಗೆ ಹಿಜಾಬ್ ಧರಿಸಿ ಬಂದು ಆವರಣ ಪ್ರವೇಶಿಸಿದ ನಂತರ ಅದನ್ನು ತೆಗೆದು ತಮ್ಮ ತಮ್ಮ ಬ್ಯಾಗ್ ಗಳಲ್ಲಿ ಇಟ್ಟುಕೊಂಡರೆ ಸಾಕು. ಅದಕ್ಕೂ ಮಿಗಿಲಾಗಿ ಇದೊಂದು ಬಾಲಕಿಯರ ಕಾಲೇಜಾಗಿದೆ. ಅದರೆ ವಿದ್ಯಾರ್ಥಿನಿಯರು ಅದನ್ನು ಮಾಡುತ್ತಿಲ್ಲ.

ಅವರೇನು ಮಾಡುತ್ತಿದ್ದಾರೆ ಅಂತ ನೀವೇ ಗಮನಿಸಿ. ಇಂದಿನ (ಗುರುವಾರ) ತರಗತಿಗಳನ್ನು ಮುಗಿಸಿಕೊಂಡು ಮನೆಗಳಿಗೆ ವಾಪಸ್ಸು ಹೋಗುತ್ತಿರುವ ತಮ್ಮ ಮುಸ್ಲಿಮೇತರ ಸಹಪಾಠಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ತಾವು ಹೊರಗೆ ನಿಂತಿರಬೇಕಾದರೆ ಬೇರೆ ವಿದ್ಯಾರ್ಥಿನಿಯರು ಕ್ಲಾಸ್ ಅಟೆಂಡ್ ಮಾಡಿದ್ದು ಘೋರ ಪಾಪ ಎಂಬಂತೆ ಅವರನ್ನು ಗೇಲಿ ಮಾಡುತ್ತಿದ್ದಾರೆ. ‘ಬೇಡ ಬೇಡ ಇಂಥ ಫ್ರೆಂಡ್ಸ್ಸ್ ನಮಗೆ ಬೇಡ, ನಿಮ್ಮ ನೀಚ ಸಂಸ್ಕೃತಿಗೆ ಧಿಕ್ಕಾರ,’ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಕೂಗುತ್ತಿರುವುದು ಆಘಾತ ಮತ್ತು ದಿಗ್ಭ್ರಮೆ ಹುಟ್ಟಿಸುತ್ತದೆ.

ಯಾರು ಇವರ ಮುಗ್ಧ ಮನಸ್ಸಿನಲ್ಲಿ ವಿಷಬೀಜ ಬಿತ್ತುತಿದ್ದಾರೆ? ಇವರು ಹೇಳುವ ಅರ್ಥವೇನು? ಬೇರೆ ಸಮುದಾಯಗಳ ವಿದ್ಯಾರ್ಥಿನಿಯರು ಸಹ ತರಗತಿಗಳನ್ನು ಅಟೆಂಟ್ ಮಾಡದೆ ತಮ್ಮೊಂದಿಗೆ ಹೊರಗೆ ನಿಂತುಕೊಳ್ಳಬೇಕು ಅಂತ್ಲಾ? ಇದರಲ್ಲಿ ಸಂಸ್ಕೃತಿಯ ಪ್ರಶ್ನೆ ಹೇಗೆ ಉದ್ಭವಿಸುತ್ತದೆ?

ಬೇರೆ ಸಮುದಾಯಗಳ ಮಕ್ಕಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ತಲೆ ಕೆಳಗೆ ಹಾಕಿಕೊಂಡು ಹೋಗುತ್ತಿದ್ದಾರೆ. ಮಹಿಳಾ ಪೊಲೀಸರು ಗೇಟಿನ ಹೊರಗಡೆ ನಿಂತು ತಮಾಷೆ ನೋಡುತ್ತಿದ್ದಾರೆ. ಘೋಷಣೆ ಕೂಗುತ್ತಿರುವ ವಿದ್ಯಾರ್ಥಿನಿಯರನ್ನು ಸುಮ್ಮನಿರಿಸುವುದು ಅವರಿಗೆ ಸಾಧ್ಯವಿಲ್ಲವೇ?

ಹಿಜಾಬ್ ವಿವಾದ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ?

TV9 Kannada


Leave a Reply

Your email address will not be published. Required fields are marked *