ಅಸ್ಸಾಂನಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುತ್ತಿರೋ ಬಿಜೆಪಿ, ಸಿಎಂ ಸ್ಥಾನಕ್ಕೆ ಹಿಮಂತ್ ಬಿಸ್ವಾ ಸರ್ಮಾ ಅವರನ್ನ ಆಯ್ಕೆ ಮಾಡಿದೆ. ಹಿಂದಿನ ಸಿಎಂ ಸೊರ್ಬಾನಂದ ಸೊನೋವಾಲ್ ಅವರು ಯಾವುದೇ ವಿರೋಧ ಎದುರಿಸಿರಲಿಲ್ಲ ಆದ್ರೂ  ಸೋನೋವಾಲ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಿಮಂತ್​​, ಈ ಬಾರಿ ಸಿಎಂ ಗದ್ದುಗೆಗೆ ಏರುತ್ತಿದ್ದಾರೆ. ಹಾಗಾದ್ರೆ ಹಿಮಂತ್ ಬಿಸ್ವಾ ಸರ್ಮಾ ಯಾರು? ಅವರ ಹಿನ್ನೆಲೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಆಲ್ ಅಸ್ಸಾಂ ಸ್ಟೂಡೆಂಟ್ಸ್​ ಯೂನಿಯನ್​ನ ಮಾಜಿ ನಾಯಕರಾದ ಹಿಮಂತ್​ ಬಿಸ್ವಾ ಸರ್ಮ  2001 ರಿಂದ 2015ರವರೆಗೆ ಅಸ್ಸಾಂನ ಜಲುಕ್ಬಾರಿ ಕ್ಷೇತ್ರದ ಕಾಂಗ್ರೆಸ್​ ಶಾಸಕರಾಗಿದ್ದರು. 2015ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈಗ ಅಸ್ಸಾಂ ರಾಜಕೀಯದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.

2016ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸರ್ಬಾನಂದ ಸೋನೊವಾಲ್ ಅವರು ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿದ್ದರೂ ಕೂಡ, ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಎಲ್ಲಾ ಕ್ರೆಡಿಟ್ಸ್​ ಸರ್ಮಾ ಅವರಿಗೆ ಸಲ್ಲುತ್ತದೆ. ಸರ್ಮಾ ಅವರ ಕೌಶಲ್ಯ, ಕಾಂಗ್ರೆಸ್  ನಾಯಕರ ಬಗ್ಗೆ ಇದ್ದ ಜ್ಞಾನ ಮತ್ತು ಅವರ ಚುನಾವಣಾ ತಂತ್ರಗಾರಿಕೆ ದೊಡ್ಡ ಮಟ್ಟದಲ್ಲಿ ಕೇಸರಿ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಈ ಚುನಾವಣೆಯಲ್ಲಿ ಸರ್ಮ ಬಿಜೆಪಿಯಿಂದ ಗೆದ್ದು, ಅಸ್ಸಾಂನ ಸಂಪುಟದಲ್ಲಿ ಸ್ಥಾನ ಪಡೆದರು.

ಇನ್ನು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ, ಅದ್ರಲ್ಲೂ ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದ ಹೊರತಾಗಿಯೂ ಬಿಜೆಪಿ ಗೆದ್ದಿತ್ತು. ಈ ಮೂಲಕ ಹಿಮಂತ್ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ್ರು. ಕೆಲವು ವರ್ಷಗಳ ಹಿಂದೆ ಬಿಜೆಪಿ ಈಶಾನ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿರಲಿಲ್ಲ. ಈಗ ಪಕ್ಷದ ನೆಲೆಯನ್ನು ವಿಸ್ತರಿಸುವಲ್ಲಿ 52 ವರ್ಷದ ಹಿಮಂತ್ ಬಿಸ್ವಾ ಸರ್ಮಾ ನೆರವಾಗಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ನೆರೆಯ ರಾಜ್ಯಗಳಾದ ಅರುಣಾಚಲಪ್ರದೇಶ, ಮಣಿಪುರ, ಮತ್ತು ತ್ರಿಪುರಾ ಮೇಲೆ ಕೂಡ ಬಿಜೆಪಿಯ ಹಿಡಿತವನ್ನು  ಬಿಗಿಗೊಳಿಸುವ ಮೂಲಕ ಸರ್ಮಾ ಅಸ್ಸಾಂ ಬಿಜೆಪಿಯ ಪ್ರಬಲ ನಾಯಕರೆಂದೇ ಪರಿಗಣಿತವಾಗಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಹಿಮಂತ್ ತಮಗೆ ಸಿಎಂ ಆಗುವ ಆಕಾಂಕ್ಷೆ ಇದೆ ಎಂಬುದನ್ನ ಎಂದಿಗೂ ಮರೆಮಾಚಿರಲಿಲ್ಲ. ರಾಜ್ಯದಲ್ಲಿ ಮತ್ತು ಪಕ್ಷದ ನಾಯಕರ ಮೇಲೆ ತಮ್ಮ ಹಿಡಿತವನ್ನ ಬಲಪಡಿಸಿಕೊಳ್ಳುತ್ತಾ ಬಂದರು. ಬಿಜೆಪಿ ಹಿರಿಯ ನಾಯಕರು ಕೂಡ ಹಿಮಂತ್ ಅವರ ರಾಜಕೀಯ ಸಾಮರ್ಥ್ಯವನ್ನ ಗುರುತಿಸಿದ್ರು, ಅಲ್ಲದೆ ಅವರನ್ನು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ(North East Democratic Alliance ) ಸಂಚಾಲಕರನ್ನಾಗಿ ನೇಮಿಸಲಾಯ್ತು. ಈ ಪ್ರದೇಶದಲ್ಲಿ ಬಿಜೆಪಿಯ ಉಪಸ್ಥಿತಿಯನ್ನು ಸುಧಾರಿಸಲು ಮತ್ತು ಬಲಪಡಿಸಲು North East Democratic Alliance ರಚಿಸಲಾಗಿದೆ.

ಈಗ ಬಿಜೆಪಿ ಹಿಮಂತ್ ಅವರನ್ನ ಸಿಎಂ ಸ್ಥಾನಕ್ಕೆ ಆರಿಸಿರೋದು ಕೂಡ ಅಪರೂಪದ ನಿರ್ಧಾರವೇ ಸರಿ. ಯಾಕಂದ್ರೆ ಕೆಲ ವರ್ಷಗಳ ಹಿಂದಷ್ಟೇ ಬೇರೆ ಪಕ್ಷದಿಂದ ಬಿಜೆಪಿಗೆ ಬಂದ ನಾಯಕನನ್ನ ಒಂದು ಪ್ರಮುಖ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿದೆ. ಅಂದ್ಹಾಗೆ ಈ ಬಾರಿ ಅಸ್ಸಾಂನಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡ ಹಿಮಂತ್ ಬಿಸ್ವಾ ಸರ್ಮಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಹಿನ್ನೆಲೆ, ಪಕ್ಷ ಹಿಮಂತ್​ ಅವರನ್ನ ಅಸಮಾಧಾನಗೊಳಿಸಿಲ್ಲ.

ಈ ಬಾರಿ ಚುನಾವಣೆಯಲ್ಲಿ ಅಸ್ಸಾಂನ ಒಟ್ಟು 126 ಕ್ಷೇತ್ರಗಳ ಪೈಕಿ ಬಿಜೆಪಿ  60 ಸೀಟ್​ಗಳನ್ನ ಗೆದ್ದಿದೆ. ಹಾಗೇ ಮಿತ್ರ ಪಕ್ಷಗಳಾದ ಎಜಿಪಿ(Asom Gana Parishad) 9 ಸ್ಥಾನ ಹಾಗೂ ಯುಪಿಪಿಎಲ್(United People’s Party Liberal)​ 6 ಸ್ಥಾನಗಳನ್ನ ತಮ್ಮದಾಗಿಸಿಕೊಂಡಿವೆ. ಕಾಂಗ್ರೆಸ್ 29 ಸ್ಥಾನಗಳನ್ನು ಗೆದ್ದರೆ, ಅದರ ಮಹಾಜೋತ್ ಮೈತ್ರಿ ಪಕ್ಷಗಳಾದ ಎಐಯುಡಿಎಫ್ 16, ಬಿಪಿಎಫ್ 4 ಮತ್ತು ಸಿಪಿಎಂ 1 ಸ್ಥಾನಗಳನ್ನ ಗೆದ್ದಿವೆ.

 

The post ಹಿಮಂತ್ ಬಿಸ್ವಾ ಸರ್ಮ ಹಿನ್ನೆಲೆ ಏನು? ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಕೆಲವೇ ವರ್ಷದಲ್ಲಿ ಸಿಎಂ ಸ್ಥಾನಕ್ಕೇರಿದ್ದು ಹೇಗೆ? appeared first on News First Kannada.

Source: newsfirstlive.com

Source link