ಹಿರಿತೆರೆಗೆ ಆ್ಯಂಕರ್​​ ಅನುಶ್ರೀ ಕಂಬ್ಯಾಕ್​​; ಹೊಸ ಸಿನಿಮಾದ ಹೀರೋ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟ ನಟಿ | Anchor Anushree To Come Back to Cinema Industry with Saitan Movie


 ಹಿರಿತೆರೆಗೆ ಆ್ಯಂಕರ್​​ ಅನುಶ್ರೀ ಕಂಬ್ಯಾಕ್​​; ಹೊಸ ಸಿನಿಮಾದ ಹೀರೋ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟ ನಟಿ

ಅನುಶ್ರೀ

ಆ್ಯಂಕರ್​ ಅನುಶ್ರೀ (Anchor Anushree) ಅವರು ಕನ್ನಡ ಕಿರುತೆರೆಯಲ್ಲಿ  ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಆ್ಯಂಕರಿಂಗ್​ನಲ್ಲಿ ಅವರಿಗೆ ಬೇಡಿಕೆ ಇದೆ. ಅವರು ಈ ಮೊದಲು ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರು ಮತ್ತೆ ಹಿರಿತೆರೆಗೆ (Big Screen) ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ‘ಮಮ್ಮಿ’, ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿಕೊಂಡಿರುವ ಲೋಹಿತ್.ಹೆಚ್. (Lohith H) ‘ಸೈತಾನ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಪಾರ್ಥಿಬನ್ ಅವರು ಲೋಹಿತ್​ಗೆ ಸಾತ್​ ನೀಡಿದ್ದಾರೆ.

ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ನಟಿ ಅದಿತಿ ಪ್ರಭುದೇವ, ಭಾವನಾ ರಾವ್, ಸಮಾಜ ಸೇವಕಿ ಮಮತಾ ದೇವರಾಜ್, ಯವರಾಜ್, ಸಂಭಾಷಣಾಕಾರ ಮಾಸ್ತಿ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರೂಪಕಿಯಾಗಿ ಹೆಸರು ಮಾಡಿರುವ ಅನುಶ್ರೀ ಈ ಸಿನಿಮಾದಲ್ಲಿ ಮುಖ್ಯಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪ್ರಭಾಕರ್ ಅವರು ನಿರ್ದೇಶಿಸುತ್ತಿದ್ದಾರೆ.

ಲೋಹಿತ್​ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಪ್ರಭಾಕರ್​. ಈಗ ಲೋಹಿತ್​ ನಿರ್ಮಾಣದ ಮೊದಲ ಸಿನಿಮಾದಲ್ಲೇ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ.  ನಟಿ ಅದಿತಿ ಪ್ರಭುದೇವ ಅವರು ಈ ಚಿತ್ರದ ಬಗ್ಗೆ, ಅನುಶ್ರೀ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ನಾನು ನಿರೂಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದೆ. ಅನುಶ್ರೀ ಕೂಡ ನಿರೂಪಕಿಯಾಗಿ ಹೆಸರು ಮಾಡಿರುವವರು. ಲೋಹಿತ್ ಅವರ ‘ಮಮ್ಮಿ’ ಚಿತ್ರ ನೋಡಿದ್ದೇನೆ. ಚಿಕ್ಕ ವಯಸ್ಸಿಗೆ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ ಕುತೂಹಲ ಹುಟ್ಟಿಸಿದೆ. ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್’ ಎಂದರು ಅದಿತಿ. ಭಾವನಾ ರಾವ್, ಮಾಸ್ತಿ, ಮಮತಾ ದೇವರಾಜ್ ಹಾಗೂ ಯುವರಾಜ್ ಕೂಡ ಚಿತ್ರತಂಡಕ್ಕೆ ಶುಭ ಕೋರಿದರು.

ಎಸ್​​​.ಎಂ.ಪಿ. ಪ್ರೊಡಕ್ಷನ್ಸ್ ಹಾಗೂ ಲೋಹಿತ್ ಎಚ್​​ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ‘ನನ್ನ ಜೊತೆ ಕೆಲಸ ಮಾಡಿರುವ ಪ್ರಭಾಕರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅನುಶ್ರೀ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರ ಅಭಿನಯ ಚೆನ್ನಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ’ ಎಂದು ಶೂಟಿಂಗ್​ ಬಗ್ಗೆ ಮಾಹಿತಿ ನೀಡಿದರು ಲೋಹಿತ್​.

ಆರಂಭದಲ್ಲಿ ಅನುಶ್ರೀ ನಟಿಸೋಕೆ ನೋ ಎಂದಿದ್ದರು. ಆ ಬಳಿಕ ಕಥೆ ಕೇಳಿ ಒಪ್ಪಿಕೊಂಡರು. ‘ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರು ನನಗೆ ಲೋಹಿತ್ ಅವರ ಪರಿಚಯ‌ ಮಾಡಿಸಿದ್ದು. ನಟನೆ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಎಂದು ಹೇಳಿದೆ. ಕಿರುತೆರೆಯಲ್ಲಿ ಆರಾಮವಾಗಿ ಇದ್ದೇನೆ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಎಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. ‘ಉಪ್ಪು ಹುಳಿ ಖಾರ’ ಚಿತ್ರದ ನಂತರ ‘ಸೈತಾನ್’ ಮೂಲಕ ರೀ ಎಂಟ್ರಿ ಕೊಡುತ್ತಿದ್ದೇನೆ. ಇದರಲ್ಲಿ ಹೀರೋ, ಹೀರೋಯಿನ್​ ಅಂತ ಯಾರೂ ಇಲ್ಲ. ಕಥೆಯೇ ನಿಜವಾದ ಹೀರೋ’ ಎಂದರು ಅನುಶ್ರೀ.

ಈ ಚಿತ್ರದಲ್ಲಿ ಗೌತಮ್ ಬಿ.ಎನ್, ಕೃತಿ, ಐಶ್ವರ್ಯಾ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಮೊದಲಾದವರು ನಟಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *