ಬೆಂಗಳೂರು: ಮೆದುಳಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆ ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಶಿವರಾಂ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನಡೆಸಲಾಗಿದೆ.
ಇನ್ನು ಶಿವರಾಂ ಅವರ ಆರೋಗ್ಯ ಪರಿಸ್ಥಿತಿ ಕುರಿತು ಅವರ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿದ್ದು ಮೂರು ದಿನಗಳ ಹಿಂದೆ ಕಾರಿನಲ್ಲಿ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ಬಳಿಕ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನಡೆಸಲಾಗಿತ್ತು. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಈ ವೇಳೆ ರೂಂ ನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದಿದ್ದಾರೆ.
ಆ ಬಳಿಕ ರಾತ್ರಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೀವಿ. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದ್ರು ಆದ್ರೆ ಅವರಿಗೆ ಸದ್ಯ 84 ವರ್ಷವಾದ್ದರಿಂದ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುವಿನಲ್ಲಿ ಟ್ರೀಟ್ಮೆಂಟ್ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.