ಸಾಂದರ್ಭಿಕ ಚಿತ್ರ
ಕ್ರಿಕೆಟ್ನಲ್ಲಿ ಔಟಾಗುವ ನಿಯಮಗಳು ಬಹುತೇಕ ಎಲ್ಲರಿಗೂ ತಿಳಿದಿವೆ. ಬ್ಯಾಟರ್ ಬೌಲ್ಡ್, ಕ್ಯಾಚ್ ಅಥವಾ ಎಲ್ಬಿಡಬ್ಲ್ಯೂ, ರನೌಟ್ ಅಥವಾ ಹಿಟ್ ವಿಕೆಟ್ ವಿಧಾನದಿಂದ ಔಟ್ ಆಗುತ್ತಾರೆ. ಆದರೆ ಇಲ್ಲೊಬ್ಬ ಆಟಗಾರ ಮೊಬೈಲ್ ಔಟಾಗಿದ್ದಾರೆ ಎಂದರೆ ನಂಬಲೇಬೇಕು. ಅಂತಹದೊಂದು ವಿಚಿತ್ರ ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಆಸ್ಟ್ರೇಲಿಯಾದ ಅಂಡರ್-16 ಪಂದ್ಯಾವಳಿಯಲ್ಲಿ (ಗ್ರಾಂಪಿಯನ್ಸ್ ಕ್ರಿಕೆಟ್ ಅಸೋಸಿಯೇಷನ್ ಜೂನಿಯರ್ಸ್ ಅಂಡರ್-16 ಪಂದ್ಯಾವಳಿ) ಮಾರ್ಕಸ್ ಎಲಿಯಟ್ ಎಂಬ ಕಿರಿಯ ಕ್ರಿಕೆಟಿಗ ವಿಚಿತ್ರವಾಗಿ ಔಟ್ ಆಗಿ ಸುದ್ದಿಯಾಗಿದ್ದಾನೆ.
ಪೊಮೊನಾಲ್ ಹಾಗೂ ಯೂತ್ ಕ್ಲಬ್ ನಡುವಣ ಈ ಪಂದ್ಯದಲ್ಲಿ ಮಾರ್ಕಸ್ ಮೊಬೈಲ್ನಿಂದಾಗಿ ಔಟಾದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯೂತ್ ಕ್ಲಬ್ ತಂಡವು ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಇದೇ ವೇಳೆ ಮಾರ್ಕಸ್ ಎಲಿಯಟ್ ಕಣಕ್ಕಿಳಿದಿದ್ದರು. ಆದರೆ ಡ್ರೆಸಿಂಗ್ ರೂಮ್ನಲ್ಲಿದ್ದ ಮಾರ್ಕಸ್ ಮೊಬೈಲ್ ಅನ್ನು ಜೇಬಿನಲ್ಲಿಟ್ಟುಕೊಂಡಿರುವುದು ಮರೆತಿದ್ದ. ಇತ್ತ ವಿಕೆಟ್ ಬೀಳುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ್ದ.
ಅದರಂತೆ ಬ್ಯಾಟ್ ಮಾಡುವ ವೇಳೆ ಜೇಬಿನಲ್ಲಿದ್ದ ಮೊಬೈಲ್ ವಿಕೆಟ್ ಮೇಲೆ ಬಿದ್ದಿದೆ. ಅತ್ತ ಬೇಲ್ಸ್ ಬೀಳುತ್ತಿದ್ದಂತೆ ಪೊಮೊನಾಲ್ ವಿಕೆಟ್ ಕೀಪರ್ ಅಪೀಲ್ ಮಾಡಿದ್ದಾರೆ. ಇದಾದ ಬಳಿಕ ಅಂಪೈರ್ ನಿಯಮದ ಪ್ರಕಾರ ಹಿಟ್ ವಿಕೆಟ್ ನೀಡಿದರು. ಅದರಂತೆ ಮೊಬೈಲ್ ಮೂಲಕ ಹಿಟ್ ವಿಕೆಟ್ ಆದ ಮೊದಲ ಆಟಗಾರ ಎಂಬ ದಾಖಲೆ ಮಾರ್ಕಸ್ ಎಲಿಯಟ್ ಪಾಲಾಯಿತು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯೂತ್ ಕ್ಲಬ್ 35 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆತಿಥೇಯ ಪೊಮೊನಾಲ್ ತಂಡ 5 ವಿಕೆಟ್ಗೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಯೂತ್ ಕ್ಲಬ್ ಈ ಪಂದ್ಯವನ್ನು ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಗೆದ್ದುಕೊಂಡಿತು. ಆದರೆ ಈ ಪಂದ್ಯವು ಮಾರ್ಕಸ್ ಅವರ ಹಿಟ್ ವಿಕೆಟ್ ನಿಂದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವುದು ವಿಶೇಷ.