ಹುಟ್ಟಿದ್ದು ಗಂಡಾಗಿ.. ಬದಲಾಗಿದ್ದು ಹೆಣ್ಣಾಗಿ..! ಈ ಖ್ಯಾತ ಸುಂದರಿಯ ಪ್ರೇಮ ಕಹಾನಿಯೇ ಬಲು ರೋಚಕ..!


ಹೆಣ್ಣಾಗಿ ಹುಟ್ಟುವುದು ಕಷ್ಟವಲ್ಲ, ಆದ್ರೆ ಹುಟ್ಟಿದ್ಮೇಲೆ ಹೆಣ್ಣಾಗುವುದು ಕಷ್ಟ. ಇವತ್ತು ನಾವು ಈ ಮಾತು ಹೇಳೋಕೆ ಕಾರಣ ಕೂಡ ಇದೆ. ಇದು ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಪರಿವರ್ತನೆಗೊಂಡು, ಟ್ರಾನ್ಸ್ಕ್ವೀನ್ ಆಫ್ ಇಂಡಿಯಾ ಅವಾರ್ಡ್ ಗೆದ್ದ ಚೆಲುವೆಯ ಕಥೆ. ಲಿಂಗ ಪರಿವರ್ತನೆಗೊಂಡ ಈಕೆಯ ಬದುಕಲ್ಲಿ ಇದೀಗ ಪ್ರೀತಿಯ ಕಿರಣಗಳು ಮೂಡಿದ್ದು, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ನಟ ಸಂಚಾರಿ ವಿಜಯ್ ಅಭಿನಯದ ನಾನು ಅವನಲ್ಲ ಅವಳು ಸಿನಿಮಾ, ಗಂಡು ಹುಡುಗನೊಬ್ಬ ಹೆಣ್ಣಾಗಿ ಪರಿವರ್ತನೆಗೊಂಡು ನಂತರ ಜೀವನ ನಡೆಸುವ ವಿಷಯದ ಮೇಲೆ ಬೆಳಕು ಚೆಲ್ಲಿತ್ತು. ಲಿಂಗ ಪರಿವರ್ತನೆ ಆದ್ಮೇಲೆ ಸಮಾಜದಲ್ಲಿ ಎದುರಾಗುವ ಅವಮಾನ, ಕುಟುಂಬದಲ್ಲಿ ಉಂಟಾಗುವ ಸಂಘರ್ಷ ಎಲ್ಲವನ್ನ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿತ್ತು. ಇಂತಹದ್ದೇ ಘಟನೆಯೊಂದು ಬಂಗಾಳದಲ್ಲಿ ನಡೆದಿದೆ. ಗಂಡಾಗಿ ಹುಟ್ಟಿ  ನಂತರ ಹೆಣ್ಣಾಗಿ ಪರಿವರ್ತನೆಗೊಂಡು, ಮುಂದೆ ಬ್ಯೂಟಿ ಪ್ರಪಂಚದಲ್ಲಿ ತನ್ನನ್ನ ತಾನು ಗುರುತಿಸಿಕೊಂಡ ಯುವತಿಯ ಕಥೆ ಇದು.

ನೋಟದಲ್ಲಿಯೇ ಕೊಲ್ಲೋ ಸುಂದರಿ, ಲುಕ್ನಲ್ಲಿ ಸೆಳೆಯೋ ಕಿನ್ನರಿ. ಥಟ್ ಎಂದು ನೋಡಿದ್ರೆ ಯಾವುದೋ ಸಿನಿಮಾ ಹೀರೋಹಿನ್ ಎಂದು ಅನ್ಸೋದು ಕಾಮನ್. ಹೀಗೆ ತಲೆಯಲ್ಲಿ ಕಿರೀಟ ಧರಿಸಿ ಮುಗುಳ್ನಗೆ ಬೀರುತ್ತಿರುವ ಈಕೆಯ ಹೆಸರು  ನಿತಾಶಾ ಬಿಸ್ವಾಸ್. ಈಕೆ ಭಾರತದ ಮೊದಲ ಟ್ರಾನ್ಸ್ಜೆಂಡರ್ ಬ್ಯೂಟಿ ಕಂಟೆಸ್ಟ್ ವಿನ್ನರ್. ಸೋಶಿಯಲ್ ಮೀಡಿಯಾಗಳಲ್ಲಿ ಈಕೆಯ ದೊಡ್ಡ ಫ್ಯಾನ್ಸ್ ಪಾಳಯ ಇದೆ. ಈಕೆಯನ್ನ ಪ್ರೀತಿಸುವ ಜನರಿದ್ದಾರೆ. ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದ ಇದೇ ನಿತಾಶಾ ಬಿಸ್ವಾಸ್  ಇದೀಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಈಕೆಯ ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕುಟುಂಬದಿಂದ ತ್ಯಜಿಸಲ್ಪಟ್ಟ ನಿತಾಶಾ ಬಿಸ್ವಾಸ್..!

ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವ ಬ್ಯೂಟಿ ಕ್ವೀನ್

ಬಂಗಾಳದ ಸಂಪ್ರದಾಯವಾದಿ ಕುಟುಂಬವೊಂದರಲ್ಲಿ ಹುಡುಗನಾಗಿ ಜನಿಸಿದ ಈಕೆ, 22 ವರ್ಷದವಳಿದ್ದಾಗ ಲಿಂಗ ಬದಲಾವಣೆಯ ಕಾರ್ಯಾಚರಣೆಯ ಪರಿವರ್ತನೆಯು ಪ್ರಾರಂಭವಾಯಿತು.  ಮುಂದೆ ನಿತಾಶ ಬಿಸ್ವಾಸ್ ಆಗಿ ಮಾರ್ಪಾಡುಗೊಂಡವರು. 26 ನೇ ವಯಸ್ಸಿನಲ್ಲಿ  ಭಾರತದ ಮೊದಲ ಟ್ರಾನ್ಸ್ ಸೌಂದರ್ಯ ರಾಣಿಯಾಗಿ ಕಿರೀಟವನ್ನು ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಾಧನೆ ಮಾಡಿದ್ದಾರೆ. ಗಂಡಾಗಿ ಹುಟ್ಟಿ ತನ್ನ ವಿರುದ್ಧ ಮನಸ್ಥಿತಿ ಬೆಳೆಸಿಕೊಂಡು ಹೆಣ್ಣಾಗಿ ಬದಲಾದ  ನಿತಾಶ ಬಿಸ್ವಾಸ್ ಇದೀಗ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಕತ್ತಲೆ ತುಂಬಿದ್ದ  ಬ್ಯೂಟಿ ಕಂಟೆಸ್ಟೆಂಟ್ ವಿನ್ನರ್ ಬದುಕಲ್ಲಿ ಇದೀಗ ಪ್ರೀತಿಯ  ಬೆಳಕು ಮೂಡಿದ್ದು, ಪ್ರೇಮದ ತರಂಗ ಶುರುವಾಗಿದೆ. ಅಷ್ಟಕ್ಕೂ ಈ  ನಿತಾಶ ಪಾಲಿನ ರಾಜಕುಮಾರ ಯಾರು ಅನ್ಕೊಂಡ್ರಾ..? ಇಲ್ಲಿದ್ದಾನೆ ನೋಡಿ. ಇದೇ ಹ್ಯಾಂಡ್ಸಮ್ ಬಾಯ್ ಕುನಾಲ್.

ಪ್ರವಾಸಕ್ಕೆ ಹೋದಾಗ ಮನದಲ್ಲಿ ಹಾರಿತ್ತು ಪ್ರೀತಿಯ ಪಾರಿವಾಳ..!

ಎಸ್.  ನಿತಾಶಾ ಹಾಗೂ ಕುನಾಲ್ ಲವ್ ಸ್ಟೋರಿನೇ ರೋಚಕ. ಬ್ಯೂಟಿ ಪ್ರಪಂಚದಲ್ಲಿ ಈ ಚೆಲುವೆ ಚಿಟ್ಟೆಯಂತೆ ಹಾರಾಡ್ತಿದ್ದ ಹೊತ್ತಲ್ಲಿ ಈಕೆಗೆ ಕುನಾಲ್ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಹುಟ್ಟಿಕೊಂಡಿತ್ತು. ಇಬ್ಬರು ಒಟ್ಟಿಗೆ ಹಿಮಾಚಾಲ ಪ್ರದೇಶಕ್ಕೆ ಟೂರ್ ಹೋಗಿದ್ರು.  ಜೊತೆಯಲ್ಲೇ ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿ ಖುಷಿಯಾಗಿ ಸಮಯ ಕಳೆದ್ರೂ. ಪಾರ್ಕ್, ಸಿನಿಮಾ ಎಂದೂ ಓಡಾಡಿದ್ರು. ಇದೇ ವೇಳೆ ಕುನಾಲ್ ಈಕೆಗೆ ಪ್ರಪೋಸ್ ಮಾಡಿದ್ದಾನೆ. ಆರಂಭದಲ್ಲಿ ತುಸು ಯೋಚ್ನೇ ಮಾಡಿದ ನಿತಾಶಾ ನಂತರ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ಲು. ಇದೀಗ ಇಬ್ಬರು ಪರಸ್ಪರ  ಪ್ರೀತಿಯ ಹಕ್ಕಿಗಳಾಗಿ ಹಾರಾಡುತ್ತಿದ್ದಾರೆ. ಅಲ್ಲದೇ ಶೀಘ್ರದಲ್ಲಿಯೇ ಮದುವೆಯಾಗುವ ನಿರ್ಧಾರಕ್ಕೆ ಕೂಡ ಬಂದಿದ್ದಾರೆ. ತನ್ನ ಲವ್ ಬಗ್ಗೆ, ತನ್ನ  ಬದುಕಿನ ಬಗ್ಗೆ, ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಎಲ್ಲವನ್ನ ನಿತಾಶ ಬಿಸ್ವಾಸ್ ಹೇಳಿಕೊಂಡಿದ್ದಾರೆ. ತನ್ನ  ಇನಿಯ ಹಾಗೂ ಜೀವನದ ಪಯಣದ ಕುರಿತು ಸ್ವತಃ ನಿತಾಶ ಬಿಸ್ವಾಸ್ ಹೇಳುವುದು ಹೀಗೆ.

ನಮಗೂ ಸಾಂಸಾರಿಕ ಜೀವನದ ಹಕ್ಕಿದೆ

ನಾನು ಹುಟ್ಟಿದ್ದು ಹುಡುಗನಾಗಿ. ಬೆಳೆಯುತ್ತಾ ನನ್ನಲ್ಲಿ ಹುಡುಗಿ ಮನಸ್ಥಿತಿ, ಲೈಂಗಿಕ ಆಲೋಚನೆ, ಬಯಕೆಗಳು ಚಿಗುರೊಡೆದವು. ಚಿಕ್ಕ ವಯಸ್ಸಿನಿಂದಲೂ ನಾನು ಹುಡುಗಿಯರ ಜೊತೆ ಹೆಚ್ಚಾಗಿ ಬೆರೆಯುತ್ತಿದೆ. ನನ್ನ ತಾಯಿಯ ಮೇಕಪ್ ಕಿಟ್ಗಳನ್ನ ಬಳಸುತ್ತಿದ್ದೆ. ತಾಯಿಯ ಸೀರೆಯನ್ನ ತಾಯಿಗೆ ಗೊತ್ತಿಲ್ಲದಂತೆ ಇಷ್ಟು ಪಟ್ಟು ಧರಿಸುತ್ತಿದ್ದೆ. ಲಿಂಗ ಪರಿವರ್ತನೆ ಮಾಡಿಕೊಳ್ಳಲು ನಿರ್ಧರಿಸಿದೆ. ನನ್ನ ದೇಹವನ್ನು ಹೆಣ್ಣಿನ ದೇಹವನ್ನಾಗಿ ಪರಿವರ್ತಿಸಲು HRTಗೆ ಅಂದ್ರೆ ಕಠಿಣವಾದ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಗೆ ಒಳಗಾಗಬೇಕಾಯಿತು. ದುರಾದೃಷ್ಟವಶಾತ್ ಚಿಕಿತ್ಸೆಯ ವೇಳೆ ನಾನು ಒಬ್ಬಂಟಿಯಾಗಿದ್ದೆ. ನನ್ನೊಂದಿಗೆ ನನ್ನ ಕುಟುಂಬ,ನನ್ನ ಎಲ್ಲಾ ಸ್ನೇಹಿತರು ಯಾರು ಇರಲಿಲ್ಲ.ಆದ್ರೆ ನಾನು ಹೆಣ್ಣಾಗಿ ಬದಲಾದೆ. ಸ್ನೇಹಿತರು, ಕುಟುಂಬಸ್ಥರು ಎಲ್ಲರಿಂದ ನಾನು ತ್ಯಜಿಸಲ್ಪಟ್ಟೆ.  ಈ ವೇಳೆ ಊಟವಿಲ್ಲದೆ, ಹಣವಿಲ್ಲದೆ ದಿನಗಟ್ಟಲೇ ಬದುಕಬೇಕಾಯಿತು.

ನಾನು ಏಕಾಂಗಿಯಾಗಿ ಸಮಸ್ಯೆಗಳನ್ನ ಎದುರಿಸಲು ನಿರ್ಧರಿಸಿದೆ. ನನ್ನ ಮನೆಯನ್ನು ತೊರೆದು ಮಾಡೆಲಿಂಗ್ ಕೋರ್ಸ್ ಸೇರ್ಕೊಂಡು ಮಾಡೆಲ್ ಆದೆ. ಇಂತಹ ಸಮಯದಲ್ಲಿ ನನ್ನ ಜೀವನದಲ್ಲಿ ಬಂದಿದ್ದೇ ಕುನಾಲ್. ಒಂದು ದಿನ ಕುನಾಲ್ ನನಗೆ ಪ್ರಪೋಸ್ ಮಾಡಿದ, ಮದುವೆ ಆಗೋದಾಗಿ ಹೇಳಿದ. ನಮ್ಮಿಬ್ಬರ ರಿಲೇಶನ್ಶಿಪ್ಗೆ 5 ವರ್ಷ ಆಗಿದೆ. ಕುನಾಲ್ ನನ್ನ ಎಂದು ಜಡ್ಜ್ ಮಾಡಿಲ್ಲ. ನನ್ನ ಮನಸ್ಥಿತಿಗೆ ವಿರುದ್ಧವಾಗಿ ಎಂದೂ ನಡೆದುಕೊಂಡಿಲ್ಲ. ನಾನು ಲಿಂಗ ಪರಿವರ್ತನೆಯಾದವಳು ಎಂದೂ ಕೀಳಾಗಿ ನೋಡ್ಲಿಲ್ಲ. ಆರಂಭದಲ್ಲಿ ನಮ್ಮ ಸಂಬಂಧವನ್ನು ರಹಸ್ಯವಾಗಿ ಇಡಲು ತೀರ್ಮಾನಿಸಿದೆವು.ಆದ್ರೆ ಅದು ಸಾಧ್ಯವಾಗ್ಲಿಲ್ಲ. ನಾವಿಬ್ಬರು ಪರಸ್ಪರ ಅರ್ಥಮಾಡಿಕೊಂಡು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಪ್ರೀತಿಸುತ್ತಿದ್ದೇವೆ. ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದೇವೆ. ಎಲ್ಲರಂತೆ ನಮ್ಮ ಪ್ರೀತಿಗೂ ನಿಮ್ಮ ಬೆಂಬಲದ ಅವಶ್ಯಕತೆಯಿದೆ. ನಮಗೂ ಸಾಂಸಾರಿಕ ಜೀವನ ನಡೆಸುವ ಹಕ್ಕಿದೆ.

-ನಿತಾಶ ಬಿಸ್ವಾಸ್

ಹೀಗೆ ಅಂದು ಕುಟುಂಬದಿಂದ ತ್ಯಜಿಸಲ್ಪಟ್ಟ ನಿತಾಶ ಮುಂದೊಂದು ದಿನ ಎಲ್ಲರೂ ಹುಬ್ಬೇರುವಂತ ಸಾಧನೆ ಮಾಡಿದ್ದಾಳೆ. ಈಕೆಯನ್ನ ಇದೀಗ ಮಗಳಾಗಿ ಈಕೆ ಅಪ್ಪ ಒಪ್ಪಿಕೊಂಡಿದ್ದು, ಈಕೆಯ ಲವ್ ಸ್ಟೋರಿಗೂ ಹಸಿರು ನಿಶಾನೆ ತೋರಿಸಿದ್ದಾರೆ. ಇದರಿಂದ ಈಕೆ ಕೂಡ ಫುಲ್ ಖುಷ್ ಆಗಿದ್ದು, ಅಪ್ಪನ ಆಶಿರ್ವಾದೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಾರೆ. ಅಂದು ಹೆಜ್ಜೆ ಹೆಜ್ಜೆಯಲ್ಲೂ ಸವಾಲುಗಳನ್ನ ಎದುರಿಸಿದ್ದ ಈಕೆ ಅವಮಾನಿಸಿದವರ ಮುಂದೆ ಇಂದು  ಸಾಧನೆಯ ಮೂಟೆಯನ್ನೇ ಇಟ್ಟಿದ್ದಾಳೆ. ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ ಅವಾರ್ಡ್ ಗೆಲ್ಲುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಇದೀಗ ನಿತಾಶ ಪ್ರೀತಿಯ ಬಲೆಯಲ್ಲಿ ಬಂದಿಯಾಗಿದ್ದು, ಪ್ರಿಯಕರ ಕುನಾಲ್ ಜೊತೆ ಕಾಲ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬೆಳೆಯುವುದೇ ಪ್ರಸ್ತುತ ಸಮಾಜದಲ್ಲಿ ದೊಡ್ಡ ಚಾಲೆಂಜ್. ಹಸಿವು, ಅವಮಾನ, ನೋವುಗಳನ್ನ ಉಂಡು ಬೆಳೆದ ಈ ನಿತಾಶ ಬಿಸ್ವಾಸ್ ಸಾಧನೆ ಸಾಮಾನ್ಯವಾದುದಲ್ಲ.

ಪ್ರೀತಿಗೆ ಜಾತಿ, ಲಿಂಗ, ಧರ್ಮದ ಹಂಗಿಲ್ಲ ನಿಜ. ಆದ್ರೆ ಇಂತಹ  ಲವ್ ಸ್ಟೋರಿಗಳು ಮಾತ್ರ ಈ ಮಾತಿಗೆ ನಿಜವಾದ ಅರ್ಥ ತುಂಬುತ್ತೆ. ಕುನಾಲ್ ಹಾಗೂ ನಿತಾಶಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದು, ಇವರ ದಾಂಪತ್ಯ ಜೀವನ ಸುಖಕರವಾಗಿರಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ವರದಿ: ಅಬ್ದುಲ್ ಸತ್ತರ್

 

News First Live Kannada


Leave a Reply

Your email address will not be published. Required fields are marked *