ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ದೃಶ್ಯಗಳು
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ (WhatsApp) ಸ್ಟೇಟಸ್ನಿಂದ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ 3 ತಿಂಗಳಿಂದ ಸಾಲು ಸಾಲು ಕ್ಯಾಂಪೇನ್ಗಳೇ (Campaign) ಈ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಲ್ಲದೆ ಶ್ರೀರಾಮನವಮಿ ದಿನದಂದು ಗಲಾಟೆ ನಡೆಯುತ್ತಿತ್ತು. ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯ ಮಸೀದಿ ಮೇಲೆ ಜೈ ಶ್ರೀರಾಮ್ ಎಂದು ಕಿಡಿಗೇಡಿಗಳು ಲೇಸರ್ ಲೈಟ್ ಹಾಕಿದ್ದರು. ಇದನ್ನು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ತಡೆದಿದ್ದರು. ನಂತರ ವಿವಾದಿತ ಪೋಸ್ಟ್ ಹಾಕುತ್ತಿದ್ದಂತೆ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿತು.
ಪೋಸ್ಟ್ ಹಾಕಿದವರನ್ನು ಮುಗಿಸಲು ಸ್ಕೆಚ್ ಹಾಕಲಾಗಿತ್ತು. ಹುಬ್ಬಳ್ಳಿಯ ಗಲ್ಲಿಗಲ್ಲಿಯಲ್ಲೂ ಗಲಾಟೆಗೆ ಸಂಚು ರೂಪಿಸಲಾಗಿತ್ತು. ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠನನ್ನು ಪೊಲೀಸರು ರಕ್ಷಿಸಿದ್ದರು. ಹೀಗಾಗಿ ಉದ್ರಿಕ್ತರ ಗುಂಪು ಪೊಲೀಸರನ್ನು ಟಾರ್ಗೆಟ್ ಮಾಡಿತ್ತು. ಇಬ್ಬರು ಪೊಲೀಸರನ್ನು ಕೊಲ್ಲಲು ಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ವಸೀಂ ಪಠಾಣ್, ಇರ್ಫಾನ್, ಮೊಹಮ್ಮದ್ ಆರೀಫ್ ಹುಬ್ಬಳ್ಳಿ ಕಿಂಗ್ಸ್ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಈ ಬಗ್ಗೆ ಕರೆ ನೀಡಿದ್ದರು. ಮೂವರ ಸೂಚನೆ ಮೇರೆಗೆ ನೂರಾರು ಜನರು ಜಮಾವಣೆ ಆಗಿದ್ದರು.
ಸಮುದಾಯ ಮುಖಂಡರು ಸುದ್ದಿಗೋಷ್ಠಿ:
ಇಂದು ಹುಬ್ಬಳ್ಳಿಗೆ ಅಲ್ಪಸಂಖ್ಯಾತರ ಆಯೋಗ ಆಗಮಿಸಲಿದೆ. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಕಾರ್ಯದರ್ಶಿ ಮೊಹಮದ್ ನಜೀರ್ ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸುತ್ತಾರೆ. ಮಧ್ಯಾಹ್ನ 12ಗಂಟೆಗೆ ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸುತ್ತಾರೆ.