ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಆದರೆ ಮುಗ್ಧರಿಗೆ ತೊಂದರೆ ಕೊಡುವುದು ಬೇಡ; ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ | Dont do problem For the innocent in hubli twitted by ex cm hd kumaraswamy


ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಆದರೆ ಮುಗ್ಧರಿಗೆ ತೊಂದರೆ ಕೊಡುವುದು ಬೇಡ; ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರು: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್​ನಿಂದ ಹುಬ್ಬಳ್ಳಿಯಲ್ಲಿ (Hubli) ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 100ಕ್ಕೂ ಹೆಚ್ಚು ಜನರನ್ನು ಪೊಲೀಸರು (Police) ಬಂಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಆದರೆ ಅಮಾಯಕರನ್ನು ಬಂಧನ ಮಾಡಿರುವ ಮಾಹಿತಿ ಬಂದಿದೆ. ಯಾವುದೇ ಕಾರಣಕ್ಕೂ ಮುಗ್ಧರಿಗೆ ತೊಂದರೆ ಕೊಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ತಿಳಿಗೇಡಿ ಯುವಕನ ಪ್ರಚೋದನಾತ್ಮಕ ಪೋಸ್ಟ್​ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ, ಕಿಡಿಗೇಡಿಗಳ ಜತೆಗೆ ಕೆಲ ಅಮಾಯಕರನ್ನೂ ಪೊಲೀಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಉದ್ರಿಕ್ತ ಮತಿಗೇಡಿ ಯುವಕರು ಎಸಗಿದ ಕೃತ್ಯಕ್ಕೆ ಸಂಬಂಧವಿಲ್ಲದವರನ್ನೂ ವಶಕ್ಕೆ ಪಡೆಯಲಾಗಿದೆ. ಕೆಲ ಕುಟುಂಬಗಳ ತಂದೆ-ತಾಯಂದಿರು ನನಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಪೊಲೀಸ್ ಠಾಣೆ, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ಹೊಡೆದವರನ್ನು ಬಿಡಬೇಡಿ, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದೇನೆ ಅಂತ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆ ದೃಶ್ಯಗಳಲ್ಲಿ ಇಲ್ಲದವರನ್ನು ಬಿಟ್ಟು ಕಳಿಸಲಾಗುವುದು ಎಂದು ಪೊಲೀಸ್ ಆಯುಕ್ತರು ನನಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಗಲಾಟೆಗೆ ಸಂಬಂಧವಿಲ್ಲದ ಮುಗ್ಧರಿಗೆ ತೊಂದರೆ ಆಗುವುದು ಬೇಡ ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಂಜುಮನ್ ಸಂಸ್ಥೆ ಮುಖಂಡರ ಜತೆ ತೆರಳಿ ಪೊಲೀಸರಿಗೆ ಮನವಿ ಕೊಡಿ ಎಂದು ಈಗಾಗಲೇ ನಮ್ಮ ಪಕ್ಷದ ಮುಖಂಡರಿಗೂ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮುಗ್ಧರಿಗೆ ಅನ್ಯಾಯ ಆಗದಿರಲಿ ಎನ್ನುವುದು ನನ್ನ ಮನವಿ ಎಂದಿದ್ದಾರೆ.

ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯುಳ್ಳ ತಾಣ. ಕೆಲ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯದವರು ಸಹೋದರರಾಗಿ ಬಾಳಿ ಬದುಕುತ್ತಿದ್ದಾರೆ. ಬವಣೆಯಲ್ಲಿ ಬೇಯುತ್ತಿರುವ ಬದುಕನ್ನು ಕಟ್ಟಿಕೊಳ್ಳುವ ಬದಲು ಕೋಮುದಳ್ಳುರಿ ಹರಡುವುದು ಬೇಡ ಅಂತ ಕುಮಾರಸ್ವಾಮಿ ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟರು.

TV9 Kannada


Leave a Reply

Your email address will not be published.