ಹುಬ್ಬಳ್ಳಿ: ನಗರದ ದುರ್ಗದ ಬೈಲ್‌ನಲ್ಲಿ ‘ಕ್ಯಾಲಿಫೋರ್ನಿಯಂ’ ಶಿಲೆಯ ಚೂರುಗಳ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಳೆಯುವ ಸ್ಟೋನ್‌ಗಳಲ್ಲಿ ಬಂಗಾರ, ಬೆಳ್ಳಿ ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಇನ್ನು ವಿಚಾರ ತಿಳಿದ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ದಾಳಿ ನಡೆಸಿ ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪ ಅರ್ಕಾಚಾರಿ ಎಂಬುವವರನ್ನು ಬಂಧಿಸಿದ್ದಾರೆ.
ಏನಿದು ‘ಕ್ಯಾಲಿಫೋರ್ನಿಯಂ’ ಕಲ್ಲು?
ಆರೋಪಿಯಿಂದ 1.35 ಲಕ್ಷ ರೂ. ಮೌಲ್ಯದ 1039 ಗ್ರಾಂ ತೂಕದ 9 ಸ್ಟೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವು ಕೋಟ್ಯಾಂತರ ರೂಪಾಯಿ ಮೌಲ್ಯವುಳ್ಳ ಶಿಲೆಗಳ ಚೂರುಗಳು ಎನ್ನಲಾಗಿದೆ. ಹೌದು 1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾರೆನ್ಸ್ರ್ಬಕೆಲಿ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇದನ್ನು ಸಂಶೋಧಿಸಲಾಗಿದ್ದು ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ನಾಮಕರಣ ಮಾಡಲಾಗಿದೆ.
ಕ್ಯಾಲಿಫೋರ್ನಿಯಂ ಎಂಬುದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು) ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹ. ಇದು ಯುರೇನಿಯಂ ನಂತರ ಅತಿ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಇದರ ಮೌಲ್ಯ ಹೆಚ್ಚು ಎನ್ನಲಾಗಿದೆ. ಸದ್ಯ 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂಪಾಯಿ ಎನ್ನಲಾಗುತ್ತಿದೆ
ಈ ಕಲ್ಲಿನಿಂದ ಪೊಲೀಸರಿಗೆ ಶುರುವಾಯ್ತು ನಡುಕ..
ವಿಚಾರ ತಿಳಿದ ನಗರ ಪೊಲೀಸ್ ಆಯುಕ್ತರು ‘ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು) ಅದನ್ನು ಬರಿಗೈಲಿ ಮುಟ್ಟಬೇಡಿ, ಮರಳಿನಲ್ಲಿ ಮುಚ್ಚಿ ಇಡಿ ಎಂದು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ . ಆಯುಕ್ತರ ಸೂಚನೆ ಬೆನ್ನಲ್ಲೇ ಸಿಬ್ಬಂದಿ ಕಲ್ಲಿನ ಹಿನ್ನೆಲೆಯನ್ನು ಹುಡುಕಿ ಹೊರಟಿದ್ದಾರೆ.
ಕ್ಯಾಲಿಫೋರ್ನಿಯಂ ಕುರಿತು ಗೂಗಲ್ನಲ್ಲಿ ಹುಡುಕಾಡಿ ಅದರ ಶಕ್ತಿ ಬಗ್ಗೆ ತಿಳಿದುಕೊಂಡ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹವಾಗಿದ್ದು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆಯಂತೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ ಆಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು ಆರಂಭದಲ್ಲಿ ಇದನ್ನು ಮುಟ್ಟಿದ ಪೊಲೀಸರು ಗಾಬರಿಗೊಳಗಾಗಿದ್ದಾರೆ.
ಇನ್ನು ಆರೋಪಿ ಇಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು ಸಿಕ್ಕಿದ್ದವು ಎಂದಿದ್ದಾನೆ. ಆದರೆ ಇದನ್ನು ಮಾರುವಾಗ ಕ್ಯಾಲಿಪೋರ್ನಿಯಂ ಎಂದು ಹೇಳಿ ಮಾರುತ್ತಿದ್ದನಂತೆ. ಈ ಕಲ್ಲಿನ ಬಗ್ಗೆ ಇವನಿಗೆ ಯಾರು ಹೇಳಿದರು ನಿಜವಾಗಿಯೂ ಈ ಕಲ್ಲುಗಳು ಎಲ್ಲಿ ಸಿಕ್ಕವು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.