ಗಂಡು ಮಗು ಹುಟ್ಟಿದಾಗ ಪೋಷಕರು ಕಾಡುತ್ತಿದ್ದ ಬಡತನವನ್ನು ಮರೆತಿದ್ದರು. ವಂಶೋದ್ಧಾರಕ ಬಂದ ಮುಂದೊಂದು ದಿನ ತಮ್ಮ ಕುಟುಂಬದ ಕಷ್ಟ ಕಾರ್ಪಣ್ಯ ಕಳೆಯುತ್ತದೆ ಅಂತ ಕನಸು ಕಂಡವರಿಗೆ ಮಗನಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ ಎಂದು ತಿಳಿದು ನಿರಾಸೆಗೊಂಡಿದ್ದರು. ಕೊನೆಗೆ ಅವರೆಲ್ಲಾ ಖುಷಿ ಆಗಿದ್ದು ಹೇಗೆ ಗೊತ್ತಾ?

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ, ಶ್ರವಣದೋಷ ಮತ್ತು ಮುಕನಾಗಿದ್ದ ಬಾಲಕನ ಮನೆಯಲ್ಲಿ ಆವರಿಸಿದ ಸಂತೋಷ
ಹುಬ್ಬಳ್ಳಿ: ವಂಶೋದ್ಧಾರಕ ಎಂದು ಅಂದುಕೊಂಡಿದ್ದ ಬಡ ಕುಟುಂಬದ ದಂಪತಿಗೆ ತಮ್ಮ ಮಗ ವಿಶೇಷ ಚೇತನ ಎಂದು ತಿಳಿದು ದುಃಖಿತರಾಗಿದ್ದರು. ಕಟ್ಟಿಕೊಂಡ ಕನಸು ಕನಸಾಗಿಯೇ ಉಳಿಯುತ್ತದೆ ಎಂಬ ಚಿಂತೆಯಲ್ಲಿ ಕಾಲಕಳೆಯುತ್ತಿದ್ದರು. ಆದರೆ ಈಗ ಬಾಲಕನಿಗೆ ಹೊಸ ಬೆಳಕು ಬಂದಿದ್ದಲ್ಲದೆ ಬಾಲಕನ ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು. ಬಾಲಕನಿಗೆ ಕಾಕ್ಲಿಯರ್ ಇಂಪ್ಲಾಂಟ್’ (ಶ್ರವಣ ದೋಷ ನಿವಾರಣೆ ಯಂತ್ರ) ಎಂಬ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬಾಲಕನಿಗೆ ಹೊಸ ಬೆಳಕನ್ನ ನೀಡಲಾಗಿದೆ. ಆ ಮೂಲಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಸಿದ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುಬ್ಬಳ್ಳಿ ಬಳಿಯ ಕಿರೇಸೂರು ಗ್ರಾಮದ 5 ವರ್ಷದ ಬಾಲಕನಿಗೆ ಜನ್ಮದಿಂದಲೇ ಶ್ರವಣ ದೋಷ ಮತ್ತು ಮೂಗನಾಗಿದ್ದ. ಈ ಬಾಲಕನ ಚಿಕಿತ್ಸೆಗಾಗಿ ಕಿಮ್ಸ್‌ನಲ್ಲಿ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯಕೀಯ ತಂಡ, ಶಸ್ತ್ರಚಿಕಿತ್ಸೆ ಎಸ್‌ಎಸ್‌ಟಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಬರುತ್ತದೆ ಎಂಬುದನ್ನು ಮನಗಂಡು ಬೆಂಗಳೂರಿನ ಇಎನ್‌ಟಿ ಶಸ್ತ್ರ ಚಿಕಿತ್ಸಕ ಡಾ.ಶಂಕರ ಮೆಡಿಕೇರಿ, ಕಿಮ್ಸ್ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ, ಅರಿವಳಿಕೆ ವಿಭಾಗದ ಡಾ. ಮಾಧುರಿ, ಡಾ.ಜ್ಯೋತಿಸೇರಿ ವೈದ್ಯಕೀಯ ಸಿಬ್ಬಂದಿ ನೇತೃತ್ವದ ತಂಡ ಚಿಕಿತ್ಸೆ ನಡೆಸಿ ವಿಶೇಷ ಸಾಧನವನ್ನು ಬಾಲಕನಿಗೆ ಅಳವಡಿಸಿದೆ. ಸದ್ಯ ಶಸ್ತ್ರಚಿಕಿತ್ಸೆ ನಂತರ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.
ಈ ಶಸ್ತ್ರಚಿಕಿತ್ಸೆಯೊಂದಿಗೆ ಶ್ರವಣ-ಮೌಖಿಕ ತರಬೇತಿ ನೀಡುವ ಮೂಲಕ ರೋಗಿಗಳು ಸಾಮಾನ್ಯ ಶ್ರವಣ ಮತ್ತು ಭಾಷೆ ಪಡೆಯಲಿದ್ದಾರೆ. ಇನ್ನು ಮುಂದೆ ಈ ಶಸ್ತ್ರಚಿಕಿತ್ಸೆಯು ಇಎನ್‌ಟಿ ವಿಭಾಗದಲ್ಲಿ ನಿರಂತರವಾಗಿ ನಡೆಯಲಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಲಕನಿಗೆ ಒಂದು ವರ್ಷದವರೆಗೆ ಥೆರಪಿ ನೀಡಲಾಗುವುದು. ರೋಟರಿಯಿಂದ ಶ್ರವಣ ಸಾಮಗ್ರಿಗಳಿಂದ ನೀಡಿದ್ದರಿಂದ ಬೇಗ ಗ್ರಹಿಸಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ 8-10 ಲಕ್ಷ ರೂಪಾಯಿ ವೆಚ್ಚ ತಗಲುವ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಲಾಗಿದೆ. ಈ ಮೂಲಕ ಸರಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಇಂತಹ ಶಸ್ತ್ರ ಚಿಕಿತ್ಸೆ ಮಾಡಿದ ಮೊದಲ ಆಸ್ಪತ್ರೆ ಎನ್ನುವ ಪ್ರಖ್ಯಾತಿಗೆ ಕಿಮ್ಸ್ ಪಾತ್ರವಾಗಿದೆ. ಈ ಯಶಸ್ವಿ ಚಿಕಿತ್ಸೆಯು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳ ಪಾಲಿಗೆ ಆಶಾ ಕಿರಣ ಮುಡಿಸಿದಂತಾಗಿದೆ.
ವರದಿ: ರಹಮತ್ ಕಂಚಗಾರ್, ಟಿವಿ 9 ಹುಬ್ಬಳ್ಳಿ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ