ಹುಬ್ಬಳ್ಳಿ ಗಲಭೆ: ಧರ್ಮದ ಹೆಸರಿನಲ್ಲಿ ಶಾಂತಿ ಕದಡುವುದು ಬೇಡ, ಶಾಸಕ ಅಬ್ಬಯ್ಯ ಪ್ರಸಾದ್ ತಾಕೀತು | Hubli Violence Dont Speard Hatredness in Name of Religions Says MLA Abbayya Prasad


ಹುಬ್ಬಳ್ಳಿ ಗಲಭೆ: ಧರ್ಮದ ಹೆಸರಿನಲ್ಲಿ ಶಾಂತಿ ಕದಡುವುದು ಬೇಡ, ಶಾಸಕ ಅಬ್ಬಯ್ಯ ಪ್ರಸಾದ್ ತಾಕೀತು

ಪೊಲೀಸರಿಗೆ ದೂರು ನೀಡಲು ಬಂದ ದಿಡ್ಡಿ ಹನುಮಂತ ದೇಗುಲ ಸಮಿತಿ ಸದಸ್ಯರು

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಬ್ಬಯ್ಯ ಪ್ರಸಾದ್ ಭಾನುವಾರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿವರ ಪಡೆದುಕೊಂಡರು. ಕೆಲವು ಕಿಡಿಗೇಡಿಗಳು ಧರ್ಮದ ಹೆಸರಲ್ಲಿ ಗಲಭೆಗೆ ಪ್ರೇರಣೆ ನೀಡುತ್ತಿದ್ದಾರೆ. ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸರೊಂದಿಗೆ ನಾವು ಚರ್ಚಿಸಿದ್ದೇವೆ. ಘಟನೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಹೇಳಿದರು. ಹುಬ್ಬಳ್ಳಿ-ಧಾರವಾಡದಲ್ಲಿ 2009ರಿಂದ ಶಾಂತಿ ನೆಲೆಸಿತ್ತು. ನಿನ್ನೆ ಕೋಮು ಸೌಹಾರ್ದಕ್ಕೆ ಧಕ್ಕೆ ಬರುವ ರೀತಿಯಲ್ಲಿ ಗಲಾಟೆಯಾಗಿದೆ. ಇನ್ನು ಮುಂದೆ ಹೀಗೆ ಆಗಬಾರದು. ಜಾತಿ ಧರ್ಮದ ಹೆಸರಿನಲ್ಲಿ ಕಿತ್ತಾಡಬಾರದು. ಕೆಲ ಕಿಡಗೇಡಿಗಳು ಜಾತಿ ಧರ್ಮದ ಹೆಸರಲ್ಲಿ ಹಿಂಸೆಗೆ ಪ್ರೇರಣೆ ಕೊಡುತ್ತಿದ್ದಾರೆ. ಇದು ತಪ್ಪು, ಶಾಂತಿ ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್​ ಪಕ್ಷದ ನಿಯೋಗದೊಂದಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಭೂ ರಾಮ್ ಅವರನ್ನು ಅಬ್ಬಯ್ಯ ಪ್ರಸಾದ್ ಭೇಟಿ ಮಾಡಿದರು. ಈ ವೇಳೆ ಶಾಸಕರ ಜೊತೆಗೆ ಎ.ಎಂ.ಹಿಂಡಸಗೇರಿ, ಅಂಜುಮನ್ ಇಸ್ಲಾಂ ಮುಖಂಡ ಯೂಸುಫ್ ಸವಣೂರು ಇದ್ದರು.

ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನೀವೆಲ್ಲರೂ ತಕ್ಷಣ ಠಾಣೆಯಿಂದ ಹೊರಗೆ ನಡೆಯಬೇಕು ಎಂದು ಪಿಎಸ್​ಐ ಸದಾನಂದ ಕಾನಟ್ಟಿ ಶಾಸಕ ಅಬ್ಬಯ್ಯಗೆ ತಾಕೀತು ಮಾಡಿದರು. ‘ನಾನು ಈ ಕ್ಷೇತ್ರದ ಶಾಸಕ. ಆಯುಕ್ತರನ್ನ ಭೇಟಿ ಮಾಡೋಕೆ ಬಂದಿದ್ದೇನೆ. ನನ್ನನ್ನೆ ನಡೆ ಅಂತಿಯಾ’ ಎಂದು ಅಬ್ಬಯ್ಯ ಸಿಟ್ಟಿಗೆದ್ದರು. ಪಿಎಸ್​ಐ ವರ್ತನೆ ವಿರುದ್ದ ಪೊಲೀಸ್ ಕಮೀಷನರ್​ಗೆ ಅಬ್ಬಯ್ಯ ದೂರಿದರು.

ಮುಖಂಡನ ಮೇಲೆ ಆರೋಪ
ಮುಸ್ಲಿಮರನ್ನು ಗಲಭೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಆರೋಪ ದಲಿತ ಮುಖಂಡರೊಬ್ಬರ ಮೇಲೆ ಬಂದಿದೆ. ‘ಪ್ರತಿಭಟನೆ ಬಿಟ್ಟು ಕದಲದಿರಿ. ಪೊಲೀಸರು ನಿಮ್ಮ ಮೈ‌ಮುಟ್ಟಲಿ ನಮ್ಮ ತಾಕತ್ತು ತೋರಿಸೋಣ. ನಮ್ಮ ಹೋರಾಟ, ಬೆಂಗಳೂರು, ದೆಹಲಿ‌ ತಲುಪಬೇಕು‌. ಈ ದೇಶವು ಯಾರೊಬ್ಬರ ಜಹಗೀರೂ ಅಲ್ಲ. ನಾವು ಸುಮ್ಮನೆ ಕೂರುವುದು ಬೇಡ ಎಂದು ಅವರು ಹೇಳಿದ್ದರು’ ಎಂದು ದೂರಲಾಗಿದೆ. ಕಳೆದ ರಾತ್ರಿ ಠಾಣೆ ಮುಂದೆ‌ ಜಮಾಯಿಸಿದ್ದ ಮುಸ್ಲಿಮರನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಈ ಭಾಷಣದ ಬಳಿಕವೇ ಗಲಭೆ ಆರಂಭವಾಯಿತು ಎಂಬ ಆರೋಪ ಕೇಳಿ ಬಂದಿದೆ.

ದೂರು ನೀಡಲು ದೇಗುಲ ಸಮಿತಿ ನಿರ್ಧಾರ
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸಮಿತಿ ಸದಸ್ಯರು ಸಭೆ ನಡೆಸಿದರು. ದೇಗುಲದ ಸಿಸಿಟಿವಿ ದೃಶ್ಯ ಆಧರಿಸಿ ದೂರು ಸಲ್ಲಿಸಲು ಸಮಿತಿ ಸದಸ್ಯರು ನಿರ್ಧರಿಸಿದರು. ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಂಥ ಘಟನೆ ಪುನರಾವರ್ತನೆ ಆಗದಂತೆ ಕ್ರಮವಹಿಸಬೇಕು ಎಂದು ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಲು ಸಮಿತಿ ನಿರ್ಧರಿಸಿತು. ಗಲಭೆ ವೇಳೆ ಕೆಲ ಕಿಡಿಗೇಡಿಗಳು ದಿಡ್ಡಿ ಹನುಮಂತ ದೇವಸ್ಥಾನ ಮೇಲೆ ಕಲ್ಲುತೂರಾಟ ನಡೆಸಿದ್ದರು.

ಎಐಎಂಐಎಂ ಮುಖಂಡನ ವಿಚಾರಣೆ
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡ್ ಸಂಖ್ಯೆ 77ರ ಎಐಎಂಐಎಂ ಕಾರ್ಪೊರೇಟರ್‌ ಹುಸೇನ್‌ಬಿ‌ ಪತಿ ಇರ್ಫಾನ್ ನಲವತ್ತವಾಡ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

TV9 Kannada


Leave a Reply

Your email address will not be published. Required fields are marked *