ಹುಬ್ಬಳ್ಳಿ: ಸಂಚಾರಿ ಠಾಣೆ ಇನ್ಸ್​ಪೆಕ್ಟರ್​ರಿಂದ ನೂತನ ಆದೇಶ; ಪತ್ರಿಕೋದ್ಯಮ ಸಂಬಂಧಿಗಳಿದ್ದರೆ ಮಾಹಿತಿ ನೀಡುವಂತೆ ಸೂಚನೆ | Inspector ordered police officers to inform their journalist relatives details in hubli


ಹುಬ್ಬಳ್ಳಿ: ಸಂಚಾರಿ ಠಾಣೆ ಇನ್ಸ್​ಪೆಕ್ಟರ್​ರಿಂದ ನೂತನ ಆದೇಶ; ಪತ್ರಿಕೋದ್ಯಮ ಸಂಬಂಧಿಗಳಿದ್ದರೆ ಮಾಹಿತಿ ನೀಡುವಂತೆ ಸೂಚನೆ

ಇನ್ಸ್​ಪೆಕ್ಟರ್​ ಮಹಾಂತೇಶ

ಹುಬ್ಬಳ್ಳಿ: ಜಿಲ್ಲೆಯ ದಕ್ಷಿಣ ಸಂಚಾರಿ ಠಾಣೆಯ ಇನ್ಸ್​ಪೆಕ್ಟರ್ (Inspector) ಹೊರಡಿಸಿದ ಅದೊಂದು ಆದೇಶ, ಸದ್ಯ ವಾಣಿಜ್ಯ ನಗರಿ ಜನರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಏಕೆ ಸ್ವತಃ ಅದೇ ಠಾಣೆ ಸಿಬ್ಬಂದಿಗಳು ಕೂಡಾ ಗುಸು ಗುಸು ಪಿಸು ಪಿಸು ಮಾತನಾಡಿಕೊಳ್ಳುವಂತೆ ಮಾಡಿದೆ. ಹೌದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವಿಭಾಗ ರಾಜ್ಯದಲ್ಲಿಯೇ ಬಹಳ ಸೂಕ್ಷ್ಮ. ಬೆಂಗಳೂರು ಬಿಟ್ಟರೆ ಎರಡನೇ ದೊಡ್ಡ ವಿಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗೇ ಇಲ್ಲಿನ ಖಾಕಿಗೆ ವಿವಾದಗಳು, ಪ್ರಶಂಶೆಗಳೇನು ಹೊಸದಲ್ಲ. ಅದರಲ್ಲೂ ಬಸರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಗಾದಿಯನ್ನು ಏರಿದ ಮೇಲಂತೂ. ಅವಳಿ ನಗರದ ಖಾಕಿ ಪಡೆ ಮತ್ತಷ್ಟು ಎಚ್ಚರಗೊಂಡಿದ್ದಾರೆ. ಹೀಗಾಗೇ ದಿನ ನಿತ್ಯದ ವ್ಯವಹಾರ ಮಾಹಿತಿಗಳು ಎಲ್ಲೂ ಸೋರಿಕೆ ಆಗದಂತೆ ನೋಡಿಕೊಳ್ಳತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡಕ್ಕೆ ಲಾಭೂರಾಮ್ ಕಮೀಷನರ್ ಆಗಿ ಬಂದಾಗಿನಿಂದ ಮತ್ತಷ್ಟು ಕಾರ್ಯವೈಖರಿ ಕಟ್ಟುನಿಟ್ಟಾಗಿದೆ. ಆದರೆ ನಿನ್ನೆ (ನವೆಂಬರ್ 19) ಸಂಜೆ ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆ ಇನ್ಸ್​ಪೆಕ್ಟರ್ ಮಹಾಂತೇಶ ಹೊಸಪೇಟೆ ಹೊರಡಿಸಿದ ಅದೊಂದು ಆದೇಶ ಠಾಣೆಯ ಸಿಬ್ಬಂದಿಯ ನಿದ್ದಗೆಡಿಸಿದೆ. ಠಾಣೆಯ ಎಲ್ಲಾ ಸಿಬ್ಬಂದಿ ತಮ್ಮ ಹಾಗೂ ಪತ್ನಿ ಕುಟುಂಬದ ಯಾರಾದರೂ ಸಂಬಂಧಿಕರು ಮಾಧ್ಯಮದಲ್ಲಿ ಕೆಲಸ‌ ಮಾಡುತ್ತಿದ್ದರೆ, ಅದು ಪತ್ರಿಕೆಗಳೇ ಆಗಿರಲಿ ಟಿವಿ ಮಾಧ್ಯಮಗಳೇ ಆಗಿರಲಿ. ಆ ಬಗ್ಗೆ ಠಾಣೆಗೆ ಬಂದು ಖುದ್ದು ಮಾಹಿತಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಆದೇಶ ಪ್ರತಿ ನೋಡುತ್ತಿದ್ದಂತೆ ಠಾಣೆಯ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಏಕೆಂದರೆ ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವುದೇ ಸದ್ಯ ಚರ್ಚೆ ಶುರು ಮಾಡಿದೆ.

ಆದೇಶದ ಹಿಂದಿದಿಯಾ ಠಾಣೆಯ ಸಿಕ್ರೇಟ್?
ಸದ್ಯ ಇನ್ಸ್​ಪೆಕ್ಟರ್ ಮಹಾಂತೇಶ ಹೊಸಪೇಟೆ ಹೊರಡಿಸಿರುವ ಆದೇಶ, ಹುಬ್ಬಳ್ಳಿ ಮಂದಿಯನ್ನು ಕೂಡಾ ಚರ್ಚೆಗೆ ಗ್ರಾಸ ಮಾಡಿದೆ.‌ ದಕ್ಷಿಣ ಸಂಚಾರಿ ಠಾಣೆಯ ಪ್ರತಿಯೊಂದು‌ ಮಾಹಿತಿಯೂ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದೆ. ಇದನ್ನು ಸೋರಿಕೆ ಮಾಡುತ್ತಿರುವುದು ಯಾರು ಎನ್ನುವುದನ್ನು ಪತ್ತೆ ಹಚ್ಚವುದಕ್ಕೆ ಇನ್ಸ್​ಪೆಕ್ಟರ್ ಈ ರೀತಿ ತಂತ್ರಕ್ಕೆ ಮೊರೆಹೋಗ್ತಿದ್ದಾರೆ. ಕಳೆದೊಂದು ವರ್ಷದಿಂದ ಠಾಣೆಯಲ್ಲಿ ನಡೆಯುತ್ತಿರು ಪ್ರತಿಯೊಂದು ಮಾಹಿತಿ ಸೋರಿಕೆಯಾಗುತ್ತಿದ್ದು, ಅದೇ ಇನ್ಸ್​ಪೆಕ್ಟರ್ ಮಹಾಂತೇಶ್ ಅವರಿಗೆ ಚಿಂತೆಗೀಡು ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಮಾಮೂಲಿ ನೀಡುವ ವಿಚಾರವಾಗಿ ನಡೆದ ಜಗಳ ಹೊರಬಿದ್ದಿದ್ದತ್ತು. ಇದೆಲ್ಲಾ ಇನ್ಸ್​ಪೆಕ್ಟರ್ ಕೋಪಕ್ಕೆ ಗುರಿಯಾಗಿದೆ. ಹೀಗಾಗಿ ಠಾಣೆಯ ಸಿಬ್ಬಂದಿಯಲ್ಲೆ ಯಾರೋ ಈ ರೀತಿ ಕೆಲಸ ಮಾಡಿದ್ದರೆಂದು ಅನುಮಾನ ಪಟ್ಟಿರುವ ಅವರು, ಇಂತದೊಂದಿ ಆದೇಶ ಮಾಡಿ ಪೇಚಿಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದೇಶ ಹೊರ ಬಿಳ್ತಿದ್ದಂತೆ ಸಭೆ ನಡೆಸಿದ ಇನ್ಸ್​ಪೆಕ್ಟರ್
ಇನ್ಸ್​ಪೆಕ್ಟರ್ ಆದೇಶ ಹೊರಡಿಸಿದಂತೆ ಮತ್ತೊಂದು ವಿವಾದ ಪಡೆಯುವುದು ಬೇಡ  ಎಂದು ತಕ್ಷಣವೇ ಡ್ಯೂಟಿ‌ ಮೇಲಿದ್ದ ಸಿಬ್ಬಂದಿಯನ್ನು ಠಾಣೆಗೆ ಕರೆಯಿಸಿ ಇನ್ಸ್​ಪೆಕ್ಟರ್ ಮಹಾಂತೇಶ ಮತ್ತೊಮ್ಮೆ ಸಭೆ ಮಾಡಿದ್ದಾರೆ. ಮತ್ತೆ ಆದೇಶವನ್ನು ಸೋರಿಕೆ‌ ಮಾಡಿದ್ಯಾರು ? ಎನ್ನುವ ಬಗ್ಗೆ ಸಿಬ್ಬಂದಿ ಹತ್ತಿರ ವಿಚಾರಣೆ ನಡೆಸಿದ್ದಾರೆ. ಆದರೆ ಯಾರು ಕೂಡಾ ಮಾಹಿತಿ‌ ನೀಡಿಲ್ಲ ಎಂದು ಹೇಳಲಾಗಿದೆ.

ನಮಗೆ ಜಿಲ್ಲಾ ವಾರ್ತಾ ಇಲಾಖೆಯಿಂದ ಮಾಹಿತಿ ಬಂದಿತ್ತು. ಆ ರೀತಿ ಯಾರಾದರು ಸಂಬಂಧಿಕರು ಇರುವ ಬಗ್ಗೆ ಮಾಹಿತಿ ನೀಡುವಂತೆ. ಅದರಂತೆ ನಾವು ಮಾಹಿತಿ ಕೇಳಿದ್ದೇವೆ. ಅದರಲ್ಲಿ ಠಾಣೆ ಮಾಹಿತಿ ಸೋರಿಕೆ ವಿಷಯವೇ ಬರುವುದಿಲ್ಲ ಎಂದು ಹು-ಧಾ ನಗರ ಪೊಲೀಸ್ ಆಯುಕ್ತ ಲಾಭೂರಾಮ್ ಹೇಳಿದ್ದಾರೆ.

ವರದಿ: ದತ್ತಾತ್ರೇಯ ಪಾಟೀಲ್

ಇದನ್ನೂ ಓದಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡ್ತಾರಾ, ಇಲ್ವಾ!?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ; ವೆಚ್ಚದ ಮಿತಿ ದಾಟದ ಅಭ್ಯರ್ಥಿಗಳು

 

TV9 Kannada


Leave a Reply

Your email address will not be published. Required fields are marked *