ಇಂದು ಜಗತ್ತು ಸಾಕಷ್ಟು ಅಭಿವೃದ್ಧಿ ಆಗಿದೆ. ಮಂಗಳನ ಮೇಲೆ ನೀರು ಹುಡುಕುವಷ್ಟು ಮಟ್ಟಿಗೆ ಬೆಳೆದಿದೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನ ಹೊಂದಿದೆ. ಹೀಗಿದ್ರೂ ಕೆಲವೊಂದು ಬಾರಿ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳೇ ಸಿಗದೇ ಪರದಾಡುವಂತಾಗಿಬಿಡುತ್ತದೆ. ಅಂಥ ಘಟನೆಗಳು ಮನುಕುಲವೇ ತಲೆತಗ್ಗಿಸುವಂತೆ ಮಾಡುತ್ತೆ. ರಾಜಸ್ಥಾನದಲ್ಲಿ ನಡೆದಿರೋ ಈ ಘಟನೆ ಕೂಡ ಅದಕ್ಕೆ ಸಾಕ್ಷಿ.

ರಾಜಸ್ಥಾನದ ಜಾಲೌರ್​ ಜಿಲ್ಲೆಯಲ್ಲಿ, ಸುಡುಬಿಸಿಲಿನಲ್ಲಿ ಹತ್ತಾರು ಕಿಲೋಮೀಟರ್​ ದೂರ ಕಾಲ್ನಡಿಗೆಯಲ್ಲಿ ಬಂದಿದ್ದ 6 ವರ್ಷದ ಬಾಲಕಿಯೊಬ್ಬಳು, ಕುಡಿಯಲು ನೀರು ಸಿಗದೆ  ಮೃತಪಟ್ಟಿದ್ದಾಳೆ. ಇಲ್ಲಿನ ರಾಣಿವಾಡಾದ ರೋಡಾ ಎಂಬ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

60 ವರ್ಷದ ಸುಖಿ ದೇವಿ, ತಮ್ಮ ಮೊಮ್ಮಗಳು ಅಂಜಲಿಯೊಂದಿಗೆ ಸಿರೋಹಿ ಬಳಿಯ ರಾಯ್‌ಪುರದಿಂದ ಮಧ್ಯಾಹ್ನ ರಾಣಿವಾಡ ಪ್ರದೇಶದ ಡುಂಗ್ರಿಯಲ್ಲಿರುವ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಕೊರೊನಾ ಹಿನ್ನೆಲೆ ವಾಹನಗಳು ಲಭ್ಯವಿಲ್ಲದ ಕಾರಣ ಬೇರೆ ದಾರಿಯಿಲ್ಲದೆ ಕಾಲ್ನಡಿಗೆಯಲ್ಲೇ ಬಾಲಕಿ ಹಾಗೂ ಅಜ್ಜಿ ಸುಮಾರು 20 ರಿಂದ 25 ಕಿಲೋಮೀಟರ್​ ದೂರ ನಡೆದುಕೊಂಡು ಬಂದಿದ್ದಾರೆ. ಆದ್ರೆ ರಾಣಿವಾಡ ತಲುಪಿ, ಮರಳು ದಿಬ್ಬಗಳ ಬಳಿ ಸಾಗುವ ವೇಳೆಗೆ ಇಬ್ಬರೂ ನಿತ್ರಾಣಗೊಂಡಿದ್ದರು.

ಈ ವೇಳೆ 45 ಡಿಗ್ರಿ ಸೆಲ್ಶಿಯಸ್​ ತಾಪಮಾನವಿದ್ದ ಕಾರಣ ಇಬ್ಬರೂ ಸುಸ್ತಾಗಿ ಕುಡಿಯಲು ನೀರು ಬೇಕೆಂದು ಹಪಹಪಿಸುತ್ತಿದ್ದರು. ಆದ್ರೆ ಕೊರೊನಾ ಸಾಂಕ್ರಾಮಿಕದ ಕಾರಣ ಈ ಪ್ರದೇಶದಲ್ಲಿ ಜನರ ಓಡಾಟ ವಿರಳವಾಗಿದ್ದು, ಯಾರೂ ಈ ಕಡೆ ಹಾದುಹೋಗಿಲ್ಲ ಎನ್ನಲಾಗಿದೆ. ಕೊನೆಗೆ ವೃದ್ಧೆ ಸುಸ್ತಾಗಿ ಮೂರ್ಛೆ ತಪ್ಪಿದರೆ.. ಬಾಲಕಿ ನಿತ್ರಾಣಗೊಂಡು ಕೊನೆಯುಸಿರೆಳೆದಿದ್ದಾಳೆ. ನಂತರ ಅಜ್ಜಿಯ ಸ್ಥಿತಿ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವೃದ್ಧೆಗೆ ನೀರು ಕುಡಿಸಿ, ಬಳಿಕ ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕಿಯ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಡಿಯಲು ನೀರು ಸಿಗದಿರುವುದೇ ಬಾಲಕಿ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

The post ಹೃದಯವಿದ್ರಾವಕ ಘಟನೆ; ರಾಜಸ್ಥಾನದಲ್ಲಿ ಕುಡಿಯಲು ನೀರು ಸಿಗದೇ 6 ವರ್ಷದ ಬಾಲಕಿ ಸಾವು appeared first on News First Kannada.

Source: newsfirstlive.com

Source link