ಹಿರಿಯ ರಂಗಭೂಮಿ ಕಲಾವಿದರು ಹಾಗೂ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ ನೀಡಿ ತಮ್ಮದೇ ಛಾಪು ಮೂಡಿಸಿದ ಕೃಷ್ಣೇ ಗೌಡರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೃಷ್ಣೇ ಗೌಡ ಅವರಿಗೆ 80 ವರ್ಷ ವಯಸ್ಸಾಗಿತ್ತು.

ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್​ ಬಂದು ಆಸ್ಪತ್ರೆ ಸೇರಿದ್ದ ಕೃಷ್ಣೇ ಗೌಡರಿಗೆ ಕೊರೊನಾ ವಾಸಿಯಾಗಿ ನೆಗೆಟಿವ್​ ದೃಢಪಟ್ಟಿತ್ತು. ಕೊರೊನಾ ಸಂಪೂರ್ಣವಾಗಿ ಗುಣಮುಖವಾಗಿದ್ದರೂ ನಂತರ ಶ್ವಾಸಕೋಶದಲ್ಲಿ ಹೆಚ್ಚು ಇನ್ಫೆಕ್ಷನ್​ ಕಾಣಿಸಿಕೊಂಡಿದ್ದ ಕಾರಣ ಕೃಷ್ಣೇಗೌಡರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಕೃಷ್ಣೇಗೌಡರು ಹೃದಯಾಘಾತದಿಂದ ನಿಧನರಾಗಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದ್ದಾರೆ. ಬಹಳ ವರ್ಷಗಳ ಕಾಲ ನಟ ಕೃಷ್ಣೇಗೌಡರು, ಮುಖ್ಯಮಂತ್ರಿ ಚಂದ್ರು ಅವರ ನಾಟಕ ಸಂಸ್ಥೆಯಲ್ಲಿ ನಟಿಸಿದ್ದಾರೆ.

ಇಪತ್ತು ದಿನಗಳ ಹಿಂದೆ, ಕೃಷ್ಣೇ ಗೌಡರು ಐಸಿಯುನಲ್ಲಿದ್ದ ಸಂದರ್ಭ ಅವರ ಪುತ್ರ ಕೊರೊನಾದಿಂದ ಕೊನೆಯುಸಿರೆಳೆದಿದ್ದರು. ಇಬ್ಬರು ಪುತ್ರರಲ್ಲಿ ಒಬ್ಬರು ನಿಧನಾರಾಗಿದ್ದು, ಕೃಷ್ಣೇ ಗೌಡರ ಸಾವಿನವರೆಗೂ ಅವರಿಗೆ ಈ ವಿಚಾರ ತಿಳಿದಿರಲಿಲ್ಲ.

ಕುಟುಂಬದಲ್ಲಿ ಅಮ್ಮನ ಮಗ ಅಂತಾನೇ ಗುರುತಿಸಿಕೊಂಡವರು ಕೃಷ್ಣೇ ಗೌಡರು. ತಂದೆಯ ಜೊತೆ ಹೆಚ್ಚಿನ ಒಡನಾಟ ಇಲ್ಲದೇ ಇದ್ದ ಇವರು, ಶಾಲಾ ದಿನಗಳಲ್ಲೂ ಫೀಸ್​, ಪುಸ್ತಕಕ್ಕೆಲ್ಲಾ ತಾಯಿಯ ಬಳಿಯೇ ದುಡ್ಡು ಕೇಳುತ್ತಿದ್ರಂತೆ. ಕೃಷ್ಣೇ ಗೌಡರು ನಟನೆಯ ಜೊತೆಗೆ ಉತ್ತಮ ವಾಲಿಬಾಲ್​ ಆಟಗಾರ ಕೂಡ ಆಗಿದ್ರು. ಕೃಷ್ಣೇ ಗೌಡ ಅವರ ತಂದೆ ರಂಗಭೂಮಿ ಕಲಾವಿದರು. ನಟನೆ ಮಾಡೋದರ ಜೊತೆಗೆ ಹೇಗೆ ನಟನೆ​​ ಮಾಡ್ಬೇಕು ಅನ್ನೋದನ್ನೂ ಹೇಳಿಕೊಡ್ತಿದ್ರಂತೆ. ತಂದೆಯ ನಾಟಕಗಳನ್ನ ನೋಡಿ ಕೃಷ್ಣೇ ಗೌಡರಿಗೆ ನಟನಾಗುವ ಆಸಕ್ತಿ ಮೂಡಿದ್ದು ಅಂತ ಸ್ವತಃ ಕೃಷ್ಣೇ ಗೌಡರೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹಲವಾರು ಚಿತ್ರ,ಧಾರಾವಾಹಿ ಹಾಗೂ ಡಾಕ್ಯುಮೆಂಟರಿಗಳಲ್ಲಿ ಅಭಿನಯಿಸಿರುವ ಕೃಷ್ಣೇ ಗೌಡರು, ಹಲವಾರು ವರ್ಷಗಳ ಕಾಲ ಚಲನ ಚಿತ್ರ ಕಲಾವಿದರ ಸಂಘದ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದರು.

The post ಹೃದಯಾಘಾತದಿಂದ ಹಿರಿಯ ಪೋಷಕ ನಟ ಕೃಷ್ಣೇ ಗೌಡ ನಿಧನ appeared first on News First Kannada.

Source: newsfirstlive.com

Source link