ಹೃದಯ ಕದ್ದ ಹುಡುಗಿಯ ಅಮ್ಮನಿಗೆ ಕಿಡ್ನಿ ಕೊಟ್ಟ ಪ್ರೇಮಿ; ಒಂದೇ ತಿಂಗಳಲ್ಲಿ ಬೇರೊಬ್ಬನನ್ನು ಮದುವೆಯಾದ ಯುವತಿ! | Love Story Man donates kidney to girlfriend mother She married someone else a month later


ಹೃದಯ ಕದ್ದ ಹುಡುಗಿಯ ಅಮ್ಮನಿಗೆ ಕಿಡ್ನಿ ಕೊಟ್ಟ ಪ್ರೇಮಿ; ಒಂದೇ ತಿಂಗಳಲ್ಲಿ ಬೇರೊಬ್ಬನನ್ನು ಮದುವೆಯಾದ ಯುವತಿ!

ಭಗ್ನ ಪ್ರೇಮಿ ಉಜೀಲ್

ಪ್ರೀತಿ ಮಾಡಿದವರೆಲ್ಲರಿಗೂ ಆ ಪ್ರೀತಿ ಸಿಕ್ಕೇ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಾವು ಪ್ರೀತಿಸುವವರಿಗಾಗಿ ಏನೆಲ್ಲಾ ತ್ಯಾಗ ಮಾಡಿದರೂ ಕೊನೆಗೂ ಆ ಪ್ರೀತಿ ನಮಗೆ ದಕ್ಕದೇ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಮೆಕ್ಸಿಕೋದ ಶಿಕ್ಷಕನಾಗಿರುವ ಉಜೀಲ್ ಮಾರ್ಟಿನೆಜ್ ಓರ್ವ ಯುವತಿಯನ್ನು ಪ್ರೀತಿ ಮಾಡಿದ್ದರು. ತಾನು ಪ್ರೀತಿ ಮಾಡಿದ ಹುಡುಗಿಯ ಖುಷಿಗಾಗಿ ಆಕೆಯ ತಾಯಿಗೆ ತಾವೇ ಒಂದು ಕಿಡ್ನಿಯನ್ನು ಕೂಡ ನೀಡಿದ್ದರು. ಆದರೆ, ಆ ಯುವತಿ ತನ್ನ ತಾಯಿಗೆ ಆಪರೇಷನ್ ಆದ ಒಂದೇ ತಿಂಗಳಲ್ಲಿ ಬೇರೊಬ್ಬ ಯುವಕನನ್ನು ಮದುವೆಯಾಗಿ ಉಜೀಲ್​ಗೆ ಕೈ ಕೊಟ್ಟಿದ್ದಾಳೆ. ತನ್ನ ಪ್ರೇಯಸಿಯ ತಾಯಿಗೆ ಕಿಡ್ನಿ ನೀಡಿದ್ದ ಆ ಯುವಕ ಇದೀಗ ಆತನಿಗೆ ಒಂದು ಕಿಡ್ನಿ ಇಲ್ಲ ಎಂಬ ಕಾರಣಕ್ಕೇ ಆಕೆಯಿಂದ ತಿರಸ್ಕರಿಸಲ್ಪಟ್ಟಿದ್ದಾನೆ! ತನ್ನ ದುರಂತ ಪ್ರೇಮಕತೆಯ ಬಗ್ಗೆ ಆತ ಸರಣಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ದಾನೆ.

ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ನಿವಾಸಿಯಾಗಿರುವ ಉಜೀಲ್ ತನ್ನ ಮಾಜಿ ಪ್ರೇಯಸಿಯ ತಾಯಿಗೆ ತನ್ನ ಕಿಡ್ನಿಯನ್ನು ದಾನ ಮಾಡಿದ್ದ ಕತೆಯನ್ನು ವಿವರಿಸಿದ ವಿಡಿಯೋ ಈಗ ವೈರಲ್ ಆಗಿದೆ. ತನ್ನ ತಾಯಿಗಾಗಿ ಕಿಡ್ನಿ ಕೊಟ್ಟ ಅವನ ನಿಸ್ವಾರ್ಥ ಮನಸನ್ನು ಮೆಚ್ಚುವ ಬದಲು ಆಕೆ ಆತನನ್ನು ತೊರೆದು ಬೇರೊಬ್ಬನನ್ನು ಮದುವೆಯಾಗಿದ್ದಾಳೆ.

ಅವನ ದುರಂತ ಪ್ರೇಮಕಥೆಗೆ ಅನೇಕ ಜನರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಮಾರ್ಟಿನೆಜ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ ಮುಖ್ಯಾಂಶವಾಗಿದೆ. ಮೆಕ್ಸಿಕೋ ನ್ಯೂಸ್ ಡೈಲಿ ವರದಿ ಮಾಡಿದಂತೆ, ಮಾರ್ಟಿನೆಜ್ ಅವರ ವೀಡಿಯೊದಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದು, ಇದರಿಂದ ನೀವು ಕುಗ್ಗಬೇಡಿ. ನಿಮ್ಮನ್ನು ಮೆಚ್ಚುವ ಪರಿಪೂರ್ಣ ಮಹಿಳೆಯನ್ನು ಹುಡುಕಿ ಎಂದು ಧೈರ್ಯ ತುಂಬಿದ್ದಾರೆ.

ನಾನು ಪ್ರೀತಿಸಿದ ಹುಡುಗಿಯ ತಾಯಿಗೆ ಕಿಡ್ನಿ ಕೊಟ್ಟೆ. ಆದರೆ, ಅದಾದ ಕೂಡಲೇ ಆಕೆ ನನ್ನೊಂದಿಗೆ ಬ್ರೇಕಪ್ ಮಾಡಿಕೊಂಡು ಒಂದೇ ತಿಂಗಳಲ್ಲಿ ಬೇರೊಬ್ಬರನ್ನು ಮದುವೆಯಾದಳು ಎಂದು ಆತ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದ್ದಾರೆ. ಆ ವಿಡಿಯೋ ಕ್ಲಿಪ್ ಅನ್ನು 14 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *