ಹೈದ್ರಾಬಾದ್​: ಕೊರೊನಾ ಬಗ್ಗೆ ಮನಸ್ಸೊಳಗೆ ಹೊಕ್ಕಿದ ಭಯದಿಂದ ಕೆಲವು ಜನರು ಇನ್ನೂ ಹೊರಬಂದಂತೆ ಕಾಣ್ತಿಲ್ಲ. ತಮಗೆ ಕೊರೊನಾ ಸೋಂಕು ಹರಡಬಹುದು ಅನ್ನೋ ಭಯದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ನಡೆದಿದೆ.

ಪ್ರತಾಪ್ (42), ಈತನ ಪತ್ನಿ ಹೇಮಲತಾ (36), ಮಗ ಜಯಂತ್ (17), ಪುತ್ರಿ ರಿಶಿತಾ (14) ಆತ್ಮಹತ್ಯೆಗೆ ಶರಣಾದವರು. ಪ್ರತಾಪ್ ಟಿವಿ ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮಗ ಹೈಸ್ಕೂಲ್​ಗೆ ಹೋಗುತ್ತಿದ್ರೆ, ರಿಶಿತಾ 7 ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಮನೆಯಿಂದ ಯಾರೂ ಹೊರ ಬರದಿರೋದನ್ನ ಗಮನಿಸಿದ ಸ್ಥಳೀಯರು, ಸಂಶಯಪಟ್ಟಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋದು ಗೊತ್ತಾಗಿದೆ.

ಪೊಲೀಸರು ಮನೆಯೊಳಗೆ ಎಂಟ್ರಿ ನೀಡಿದಾಗ ನಾಲ್ವರೂ ನೆಲದ ಮೇಲೆ ನಿರ್ಜೀವವಾಗಿ ಬಿದ್ದಿದ್ದರು. ಅಲ್ಲದೇ ಮೃತ ದೇಹಗಳ ಪಕ್ಕದಲ್ಲಿ ಸೂಸೈಡ್ ನೋಟ್​ ಪತ್ತೆಯಾಗಿದ್ದು, ಡೆತ್​ನೋಟ್​ನಲ್ಲಿ ಕುಟುಂಬ ಒತ್ತಡಕ್ಕೆ ಒಳಗಾಗಿತ್ತು ಅನ್ನೋದು ಗೊತ್ತಾಗಿದೆ. ಈಗಾಗಲೇ ಸ್ನೇಹಿತರು ಹಾಗೂ ಸಂಬಂಧಿಕರ ಸಾವನ್ನ ಕಣ್ಣಾರೆ ಕಂಡು ತುಂಬಾ ನೊಂದುಕೊಂಡಿದ್ದೇವೆ. ಅಲ್ಲದೇ ನಮಗೂ ಕೊರೊನಾ ಬರಬಹುದು ಅನ್ನೋ ಭಯ ಇದೆ ಅನ್ನೋದನ್ನ ಪತ್ರದಲ್ಲಿ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ತೀರಾ ಕಡಿಮೆ ಇದೆ. ಹಣ್ಣು ಹಣ್ಣಾದ ವೃದ್ಧರೂ ಕೂಡ ಕೊರೊನಾದಿಂದ ಸೆಣಸಿ ಬದುಕಿ ಬರುತ್ತಿರುವ ಇವತ್ತಿನ ಸಂದರ್ಭದಲ್ಲಿ, ಅಲ್ಲದೇ ವ್ಯಾಕ್ಸಿನ್​ಗಳು ಸಿಗುತ್ತಿರುವ ಈ ಹೊತ್ತಿನಲ್ಲಿ ಈ ಕುಟುಂಬ ಆತ್ಮಹತ್ಯೆಗೆ ಶರಣಾಗಿರೋದು ನಿಜಕ್ಕೂ ದುರಂತವೇ ಸರಿ.

The post ಹೃದಯ ವಿದ್ರಾವಕ ಘಟನೆ; ಕೊರೊನಾ ಬರುತ್ತೆಂದು ಹೆದರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ appeared first on News First Kannada.

Source: newsfirstlive.com

Source link