ಹೆಂಗಿದೆ ‘ಸಖತ್’ ಮೂವಿ? ಚಿತ್ರದ ಪ್ಲಸ್​, ಮೈನಸ್​ ಏನು..?


ಏನೇ ಪ್ರಚಾರ ಮಾಡಿದ್ರು, ಯಾರೇ ಸ್ಟಾರ್ ಆಗಿದ್ದರೂ, ಅಲ್ಟಿಮೆಟ್ಟಾಗಿ ವರ್ಕ್ ಆಗೋದು ಜನಕ್ಕೆ ಒಂದೊಳ್ಳೆ ಎಂಟರ್​ಟೈನ್ಮೆಂಟ್ ಸಿಕ್ಕಾಗ ಮಾತ್ರ. ರಂಜನೆ ರಸಪಾಕ ಕೊಂಚ ಡಿಫರೆಂಟ್ ಆಗಿದ್ರೆ ಸಾಕು ಕನ್ನಡಿಗರ ಅಪ್ಪಿಕೊಂಡು ಒಪ್ಪಿಕೊಂಡು ಮೆರವಣಿಗೆ ಮಾಡಿಬಿಡ್ತಾರೆ. ನಿರೀಕ್ಷೆಯನ್ನ ತನ್ನ ಹೆಗಲ ಮೇಲೆರಿಸಿಕೊಂಡಿದ್ದ ಸಖತ್ ಕೊನೆಗೂ ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ಹಾಗಾದ್ರೆ ಹೇಗಿದೆ ಸಖತ್ ಸಿನಿಮಾ? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹೊಸ ಸಿನಿಮಾ ನೋಡಿ ಬಂದವರಿಗೆ; ಸಿನಿಮಾ ಹೆಂಗಿದೆ ಗುರು? ಅಂತ ಕೇಳಿದ್ರೆ ಸಕ್ಕತ್ತಾಗಿದೆ ಅಂತ ಹೇಳ್ತಾರೆ. ಇನ್ನು ಸಿನಿಮಾದ ಹೆಸರೇ ಸಖತ್ ಅಂತ ಇಟ್ರೆ ಏನ್ ಉತ್ತರ ಕೊಡೊದು ಅನ್ನೋದನ್ನ ನಿರ್ದೇಶಕ ಸಿಂಪಲ್ ಸುನಿ ಅವರೇ ಹೇಳಬೇಕು.

ಎರಡನೇ ಲಾಕ್ ಡೌನ್ ನಂತರ ಮಾಸು, ಕ್ಲಾಸು, ಲವ್ ಸ್ಟೋರಿ, ಕ್ರೈಮ್ ಥ್ರಿಲ್ಲರ್ ಸ್ಟೋರಿಗಳನ್ನ ನೋಡಿ ತೃಪ್ತನಾಗಿದ್ದ ಸಿರಿಗನ್ನಡ ಸ್ಯಾಂಡಲ್​ವುಡ್ ಪ್ರೇಕ್ಷಕರಿಗೆ ಸಖತ್ ಸಿನಿಮಾ ಸಕ್ಕತ್ತಾದ ಕಾಮಿಡಿ ಎಂಟರ್​ ಟೈನ್ಮೆಂಟ್ ಅನ್ನ ಭರ್ಜರಿಯಾಗಿಯೆ ನೀಡುತ್ತದೆ. ಇದನ್ನ ನಾವು ಮಾತ್ರ ಹೇಳ್ತಿಲ್ಲ ಸಿನಿಮಾ ನೋಡಿದ ಪ್ರತಿಯೊಬ್ಬರು ಹೇಳಿದ ಮಾತು.

ಹೆಸರಿಗೆ ತಕ್ಕನಾಗೆ ಸಕ್ಕತ್ತಾಗಿದೆಯಾ ‘ಸಖತ್’ ಸಿನಿಮಾ
ಚಮಕ್ ಸಿನಿಮಾ ಮಾಡಿ ಗೆದ್ದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸಖತ್ ಸಿನಿಮಾವನ್ನ ಸಕ್ಕತ್ತಾಗಿಯೇ ಮಾಡಿದ್ದಾರೆ. ಗಣೇಶ್ ಎಂತಹ ನಟ ಅನ್ನೋದು ಈ ಸಿನಿಮಾದಲ್ಲಿ ಮತ್ತೊಮ್ಮೆ ಸಾಬೀತು ಆಗುತ್ತದೆ. ಬಾಲು ಎಂಬುವ ಸಾಂದರ್ಭಿಕ ಕುರುಡ ಪಾತ್ರದಲ್ಲಿ ಲೀಲಾಜಾಲವಾಗಿ ನವರಸಗಳನ್ನ ನವರಾತ್ರಿ ಹಬ್ಬವನ್ನೇ ಸಖತ್ ಸಿನಿಮಾದಲ್ಲಿ ಗಣೇಶ್ ನೀಡಿದ್ದಾರೆ.

ಗಣೇಶ್ ಸಿನಿಮಾ ಆನ್ ಸ್ಕ್ರೀನ್ ನಾಯಕ ಆದ್ರೆ ಆಪ್ ಸ್ಕ್ರೀನ್ ನಾಯಕ ಸಿಂಪಲ್ ಸುನಿ.. ಒಂದು ಕ್ರೈಮಂ ಥ್ರಿಲ್ಲರ್ ಕೋರ್ಟ್ ಡ್ರಾಮಾವನ್ನ ಕಾಮಿಡಿ ಪ್ಲಸ್ ಎಮೋಷನಲ್ ಆಗಿ ಹೇಗೆ ತೆಗೆದುಕೊಂಡು ಹೋಗಬೇಕು ಅನ್ನೋದನ್ನ ಅತ್ಯಅದ್ಭುತವಾಗಿ ನಿರೂಪಣೆ ಮಾಡಿ ತೋರಿಸಿದ್ದಾರೆ ಸಿಂಪಲ್ ಸುನಿ.

ಸಖತ್ ಸಿನಿಮಾದ ಒನ್ ಲೈನ್ ಸ್ಟೋರಿ ಏನು?
ರಿಯಾಲಿಟಿ ಶೋ+ ಕೋರ್ಟ್ ಡ್ರಾಮಾ= ಸಖತ್

ಬಾಲು ಅನ್ನೋ ಅಂಧ.. ಬಾಲು ಏಕೆ ಅಂಧನಾದ ಅನ್ನೋದೆ ಸಿನಿಮಾ ಕಥೆಯ ಚೆಂದ ಅಂದ.. ಕಣ್ಣು ಕಾಣದ ಅಂಧನೊಬ್ಬ ಌಕ್ಸಿಡೆಂಟ್ ವಿಚಾರವಾಗಿ ಸಾಂದರ್ಭಿಕ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಬರೋ ಸೀನ್​​ನಿಂದ ಸಿನಿಮಾದ ಕಥೆ ತೆರೆದುಕೊಳ್ಳುತ್ತೆ. ರಿಯಾಲಿಟಿ ಶೋ ನಡೆಸಿಕೊಡೋ ಌಂಕರ್ ಮಯೂರಿ ಹಾಗೂ ಆಕೆಯ ಪ್ರೀತಿಗಾಗಿಯೇ ಕಣ್ಣಿದ್ದೂ ಅಂಧನಂತೆ ನಟಿಸೋ ಮೂಲಕ ಸಿಂಗರ್ ಆಗಿ ಶೋಗೆ ಎಂಟ್ರಿ ಕೊಡೋ ಬಾಲು. ರಿಯಾಲಿಟಿ ಶೋನಲ್ಲಿ ಹೆಚ್ಚು ವೀಕ್ಷಣೆಗಾಗಿ ಮಾಡೋ ಸರ್ಕಸ್ ಆ ಸರ್ಕಸ್​​ನೊಳೆಗೆ ಒಂದು ಸಸ್ಪೆನ್ಸ್. ಆ ಮಧ್ಯೆ ಅಂಧರ ಶಾಲೆ ನಡೆಸೋ ಮಹಾನುಭಾವರೊಬ್ಬರ ಕೊಲೆಯಾಗುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗೋ ಬಾಲು, ಕಣ್ಣಿಲ್ಲ ಅಂತ ಸಾಂದರ್ಭಿಕ ಸಾಕ್ಷಿ ಆಗ್ತಾರೆ. ಕೋರ್ಟ್ ಡ್ರಾಮಾದಲ್ಲಿ ಆತ ತನ್ನ ಚಾಕಚಕ್ಯತೆ ತೋರಿಸೋ ಮೂಲಕ, ಅದು ಌಕ್ಸಿಡೆಂಟ್ ಅಲ್ಲ, ಕೊಲೆ ಅನ್ನೋದನ್ನ ಪ್ರೂವ್ ಮಾಡ್ತಾರೆ. ಅದ್ಹೇಗೆ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ.. ಇದು ಒನ್ ಲೈನ್ ಸ್ಟೋರಿಯಾಗಿದ್ದರೂ ಹೆಜ್ಜೆ ಹೆಜ್ಜೆಗೂ ಕ್ಷಣ ಕ್ಷಣಕ್ಕೂ ಪ್ರೇಕ್ಷಕರನ್ನ ನಗಿಸುತ್ತಾ, ಒಂದು ಕ್ಷಣ ಕಣ್ಣಿನಲ್ಲಿ ಕಣ್ಣೀರು ತರಿಸುತ್ತಾ ಆಗಾಗ ಲವ್ ಸಾಂಗ್ ಹೇಳುತ್ತಾ ಸಿನಿಮಾ ಸಾಗೋದೆ ಗೊತ್ತಾಗೋಲ್ಲ. ಒಟ್ಟಿನಲ್ಲಿ ಸಖತ್ ಸಿನಿಮಾ ರಂಜನೆಯ ಜೋನಿ ಬೆಲ್ಲ.

ಸಖತ್ ಚಿತ್ರದಲ್ಲಿ ಯಾರು ಬೆಸ್ಟು? ಯಾರು ನೆಕ್ಸ್ಟು?
ಮಸ್ತ್ ಎಂಟರ್ಟೈನ್ಮೆಂಟ್ ಕೊಡೋ ಗಣಿಗೆ, ಅವ್ರ ತಾಕತ್ತಿಗೆ ತಕ್ಕನಾದ ಕಥೆ ಸಖತ್. ಬಾಲು ಪಾತ್ರದ ಮುಖೇನ ಗಣೇಶ್ ಮತ್ತೆ ತನ್ನ ಅಭಿನಯ ಚತುರತೆ ಚಮತ್ಕಾರ ವೈಭವನ್ನೆ ಮತ್ತೆ ವಾಪಸ್ ಕೊಟ್ಟಿದ್ದಾರೆ. ಸ್ಟೈಲು, ಮ್ಯಾನರಿಸಂ ಜೊತೆ ಎರಡು ಶೇಡ್​​​ಗಲ್ಲಿ ಗಣಿ ಚಾಲೆಂಜಿಂಗ್ ರೋಲ್ ಪ್ಲೇ ಮಾಡಿದ್ದಾರೆ. ಕಾಮಿಡಿ ಟೈಂ ಜೊತೆ ಎಮೋಷನ್​​​ ಅನ್ನ ಎಕ್ಸ್​ಸ್ಟ್ರಾಡ್ನರಿಯಾಗಿ ಡಿಲೆವರಿ ಮಾಡಿದ್ದಾರೆ. ಶುರುವಿನಿಂದ ದಿ ಎಂಡ್ ತನಕ ಗಣಿಗೆ ಗಣಿಗೆ ಸರಿಸಾಟಿ ಸಾರ್ವಭೌಮ.

ಸಖತ್ ಸಿನಿಮಾದಲ್ಲಿ ಬರೋ ಎಲ್ಲಾ ಪಾತ್ರಗಳನ್ನ ನಿರ್ವಹಿಸಿರೋ ಕಲಾವಿದರು ನಿರ್ದೇಶಕರ ಸೃಷ್ಟಿಗೆ ಹೊಸ ದೃಷ್ಟಿಕೊಟ್ಟಿದ್ದಾರೆ. ಸುರಭಿ ಪುರಾಣಿಕ್ ಮೊದಲಾರ್ಧದಲ್ಲಿ ರಿಯಾಲಿಟಿ ಶೋ ಌಂಕರ್ ಮಯೂರಿಯಾಗಿ ಸಿನಿಮಾನ ಆವರಿಸಿಕೊಂಡ್ರೆ, ದ್ವಿತಿಯಾರ್ಧದಲ್ಲಿ ಅಂಧ ಮಕ್ಕಳ ಶೀಕ್ಷಕಿಯಾಗಿ ನಕ್ಷತ್ರ ಪಾತ್ರದಾರಿ ನಿಶ್ವಿಕಾ ಗಮನ ಸೆಳೆಯುತ್ತಾರೆ. ಸುರಭಿ ಅವರದ್ದು ಗ್ಲಾಮರ್ ರೋಲ್ ಆದ್ರೂ, ನಿಶ್ವಿಕಾ ಮಾತ್ರ ಚಾಲೆಂಜಿಂಗ್ ರೋಲ್ ಮಾಡಿ ಸೈ ಜೈ ಅನಿಸಿಕೊಳ್ತಾರೆ.

ಕಾಮಿಡಿ ಪಾತ್ರದಾರಿಗಳಾದ ಸಾಧು ಕೋಕಿಲಾ, ಗಿರಿ ಹಾಗೂ ಧರ್ಮಣ್ಣ ಕಾಮಿಡಿ ಟ್ರ್ಯಾಕ್ ನೋಡುಗರಿಗೆ ಮಸ್ತ್ ಕಿಕ್ ಕೊಡಲಿದೆ. ಕೋರ್ಟ್ ಡ್ರಾಮಾದ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ರಂಗಾಯಣ ರಘು ವಕೀಲನ ಪಾತ್ರದಲ್ಲಿ ಧಮಾಕನೇ ಮಾಡ್ತಾರೆ. ಇನ್ನೂ ಶೋಭರಾಜ್, ಕುರಿ ಪ್ರತಾಪ್, ಉತ್ಪಲ್, ರಘುರಾಮ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸಖತ್ ಸಿನಿಮಾದ ಪಾತ್ರವರ್ಗದಲ್ಲಿ ಇಂಪಾರ್ಟೆಂಟ್ ಆಗಿ ಮೆನ್​ಷನ್ ಮಾಡಿ ಹೇಳಲೇ ಬೇಕಾಗಿರೋ ಪಾತ್ರ ವಿಹಾನ್ ಗಣೇಶ್ ಅವರದ್ದು. ಗಣೇಶ್ ಅವರ ಪುತ್ರ ಈ ಚಿತ್ರದಲ್ಲಿ ಜೂನಿಯರ್ ಬಾಲು ಪಾತ್ರವನ್ನ ಮಾಡಿದ್ದಾರೆ. ವಿಹಾನ್ ಅಲಿಯಾಸ್ ಜೂನಿಯರ್ ಬಾಲು ಕಣ್ಣಿನಲ್ಲೇ ಆಟ ಆಡಿದ್ದಾರೆ. ಅದು ಥಿಯೇಟರ್​​ನಲ್ಲಿ ಸಿನಿಮಾ ನೋಡೋರಿಂದ ಶಿಳ್ಳೆ- ಚಪ್ಪಾಳೆ ತರಿಸುತ್ತೆ. ಅಷ್ಟೇ ಅಲ್ಲ, ಭವಿಷ್ಯದ ಅದ್ಭುತ ಕಲಾವಿದನಾಗೋ ಸೂಚನೆ ಸಿಗುತ್ತದೆ.

ಪೂಜೆ ಮಾಡುವಾಗ ಮೊದಲ ಗಣಪನಿಗೆ ವಂದಿಸಿ ಬೇರೆ ದೇವರುಗಳನ್ನ ಒಲಿಸಿಕೊಳ್ಳುವ ಹಾಗೆ ಇದು KVN ಪ್ರೊಡಕ್ಷನ್ಸ್ ಮೊದಲ ಸಿನಿ ಕಾಣಿಕೆ. ನಿಶಾ ವೆಂಕಟ್ ಕೋಣಂಕಿ ಹಾಗೂ ಸುಪ್ರೀತ್ ನಿರ್ಮಾಣದ ಚಿತ್ರವಾಗಿದ್ದು, ಫ್ಯಾಷನಿಟಕ್ ಪ್ರೋಡ್ಯುಸರ್ಸ್​​ಗಳ ಸಿನಿಮಾ ಕ್ರೇಜ್ ಫ್ರೇಮಿ ಕಣ ಕಣದಲ್ಲೂ ಕಾಣುತ್ತದೆ. ಜ್ಯೂಡ ಸ್ಯಾಂಡಿ ಸಂಗೀತ, ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್ ಅದ್ಭುತ. ಒಟ್ಟಿನಲ್ಲಿ ಒಂದೊಳ್ಳೆ ಎಂಟರ್​​ಟೈನ್ಮೆಂಟ್ ಸಿನಿಮಾ ನೀಡಲು ಇಡೀ ಚಿತ್ರತಂಡ ಶ್ರಮಿಸಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿನಿಮಾದಲ್ಲಿ ಕಾಣುತ್ತಿದೆ. ಕನ್ನಡ ಚಿತ್ರಪ್ರೇಮಿಗಳೇ ಒಂದೊಳ್ಳೆ ಕಾಮಿಡಿ ಎಂಟರ್​ಟೈನರ್ ಸಿನಿಮಾ ನಿಮ್ಮ ಮುಂದೆ ಬಂದಿದೆ.

ವಿಶೇಷ ವರದಿ: ಶ್ರೀಧರ್ ಶಿವಮೊಗ್ಗ

News First Live Kannada


Leave a Reply

Your email address will not be published. Required fields are marked *