ಹೆಚ್ಚುತ್ತಿರುವ ಕೊರೊನಾ ಸೋಂಕು; ಉತ್ತರ ಪ್ರದೇಶದಲ್ಲಿ ಜ.23ರವರೆಗೆ ಎಲ್ಲ ಶಾಲಾ-ಕಾಲೇಜುಗಳೂ ಬಂದ್ | Schools and Colleges in Uttar Pradesh Remain Shut till January 23


ಹೆಚ್ಚುತ್ತಿರುವ ಕೊರೊನಾ ಸೋಂಕು; ಉತ್ತರ ಪ್ರದೇಶದಲ್ಲಿ ಜ.23ರವರೆಗೆ ಎಲ್ಲ ಶಾಲಾ-ಕಾಲೇಜುಗಳೂ ಬಂದ್

ಸಾಂಕೇತಿಕ ಚಿತ್ರ

ಲಖನೌ: ಉತ್ತರಪ್ರದೇಶದಲ್ಲಿ ಜನವರಿ 23ರವರೆಗೂ ಎಲ್ಲ ಶಾಲಾ-ಕಾಲೇಜುಗಳೂ ಬಂದ್ ಇರಲಿವೆ ಎಂದು ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೊವಿಡ್​ 19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಸಕ್ತ ಆದೇಶ ಹೊರಡಿಸಿದೆ. ಈ ಹಿಂದೆ ಜನವರಿ 5ರಂದು ಆದೇಶ ಪ್ರಕಟಣೆ ಹೊರಡಿಸಿದ್ದ ಸರ್ಕಾರ, ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 10ನೇ ತರಗತಿವರೆಗಿನ ಎಲ್ಲ  ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಿತ್ತು. ಆ ನಿಯಮದ ವ್ಯಾಪ್ತಿಯನ್ನೀಗ ವಿಸ್ತರಿಸಲಾಗಿದ್ದು, ಜನವರಿ 23ರವರೆಗೆ ಎಲ್ಲ ಶಾಲೆ-ಕಾಲೇಜುಗಳನ್ನೂ ಬಂದ್​ ಮಾಡಲು ನಿರ್ಧಾರ ಮಾಡಿದೆ. 

ಉತ್ತರಪ್ರದೇಶವಷ್ಟೇ ಅಲ್ಲ, ಇತರ ಕೆಲವು ರಾಜ್ಯಗಳೂ ಕೂಡ ಶಾಲೆ-ಕಾಲೇಜುಗಳಿಗೆ ನಿರ್ಬಂಧ ವಿಧಿಸಿವೆ.  ತೆಲಂಗಾಣದಲ್ಲಿ ಜನವರಿ 30ರವರೆಗೆ, ಮಧ್ಯಪ್ರದೇಶದಲ್ಲಿ ಜನವರಿ 31ರವರೆಗೆ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಶಾಲೆಗಳು ಜನವರಿ 31ರವರೆಗೆ ಬಂದ್ ಇರಲಿದೆ. ಕೇರಳದಲ್ಲಿ ಜನವರಿ 21ರವರೆಗೆ, 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​ ನಡೆಯಲಿದೆ.  ತಮಿಳುನಾಡಲ್ಲೂ ಕೂಡ ಶಾಲೆಗಳನ್ನು ಬಂದ್​ ಮಾಡಲಾಗಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಇಂದು ರಾಜ್ಯದ ಕೊರೊನಾ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದ್ದರು. ಕೊವಿಡ್​ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಲಖನೌದ ಕಿಂಗ್ ಜಾರ್ಜ್​ ಮೆಡಿಕಲ್​ ವಿಶ್ವವಿದ್ಯಾಲಯದಲ್ಲಿ ಮಾಡಲಾಗಿರುವ ವ್ಯವಸ್ಥೆ ಪರಿಶೀಲನೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಉತ್ತರ ಪ್ರದೇಶದಲ್ಲಿ 1.03 ಲಕ್ಷ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಲಖನೌದಲ್ಲಿ ಇಂದು 2300 ಕೇಸ್​ಗಳು ದಾಖಲಾಗಿವೆ. ಹಾಗೇ, ಲಖನೌನದಲ್ಲಿ 16,300 ಕೊರೊನಾ ಸೋಂಕಿನ ಸಕ್ರಿಯ ಕೇಸ್​ಗಳಿವೆ. ಆದರೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಶೇ.1ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ಸಾಗುತ್ತಿದೆ. ಹೀಗಾಗಿ ಮೂರನೇ ಅಲೆ, ಜನರ ಮೇಲೆ ಅಷ್ಟೊಂದು ವ್ಯತಿರಿಕ್ತ ಪ್ರಭಾವ ಬೀರಲಾರದು. ಉತ್ತರ ಪ್ರದೇಶದಲ್ಲಿ ಈಗಾಗಲೇ 22.87 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಹಾಗೇ, 15-18 ವರ್ಷದವರಿಗೆ 21.37 ಲಕ್ಷ ಡೋಸ್ ನೀಡಿಕೆಯಾಗಿದೆ. 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಯಿಂದ ಬಳಲುತ್ತಿರುವ 3.87 ಮಂದಿಗೆ ಬೂಸ್ಟರ್​ ಡೋಸ್ ಕೊಡಲಾಗಿದೆ ಎಂದು ಯೋಗಿ ಆದಿತ್ಯನಾಥ್​ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬರುವ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿ, ಲಸಿಕೆ ನೀಡಿಕೆ ವೇಗ ಹೆಚ್ಚಿಸುವ ಅನಿವಾರ್ಯತೆಯಿದೆ.

TV9 Kannada


Leave a Reply

Your email address will not be published. Required fields are marked *