ಯಾರು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೋ ಅಥವಾ ಹೆರುತ್ತಾರೋ ಅಂತಹ ಕುಟುಂಬದ ಪೋಷಕರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಅಂತ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೋಮಾವಿಯಾ ರಾಯಟ್ಟೆ ಘೋಷಿಸಿದ್ದಾರೆ.

ತಾವು ಪ್ರತಿನಿಧಿಸುವ ಐಜ್ವಾಲ್ ಪೂರ್ವ ಮತ ಕ್ಷೇತ್ರದ ಜನರಿಗೆ ರಾಬರ್ಟ್ ಈ ರೀತಿಯ ಸಂದೇಶವನ್ನು ನೀಡಿದ್ದಾರೆ. ಮಿಜೋರಾಂನಲ್ಲಿ ಮಿಜೋ ಬುಡಕಟ್ಟು ಜನಾಂಗದ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಇವರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಂಡಿದ್ದೇನೆ. ಹಣವನ್ನ ವೈಯಕ್ತಿಕವಾಗಿ ನೀಡುತ್ತೇನೆ ಅಂತ ರಾಬರ್ಟ್‌ ಹೇಳಿದ್ದಾರೆ.

2011ರ ಜನಗಣತಿಯ ಪ್ರಕಾರ, ಮಿಜೋರಾಂ 10.91 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದ ಎರಡನೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಮಿಜೋರಾಂ ಸುಮಾರು 21,087 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಅದರಲ್ಲಿ ಶೇಕಡಾ 91 ರಷ್ಟು ದಟ್ಟವಾದ ಅರಣ್ಯವಿದೆ.

ಯುಪಿಯಲ್ಲಿ 2ಕ್ಕೂ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಸೌಲಭ್ಯ ರದ್ದತಿಗೆ ಚಿಂತನೆ
ಆದ್ರೆ ಇದಕ್ಕೆ ತದ್ವಿರುದ್ಧವಾಗಿ ಉತ್ತರಪ್ರದೇಶದಲ್ಲಿ, ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ ಎನ್ನಲಾಗ್ತಿದೆ.

ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯದ ಸಂಪನ್ಮೂಲಗಳ ಮೇಲೆ ಪ್ರಭಾವ ಬೀರಿದೆ. ಜನಸಂಖ್ಯೆ ಹೆಚ್ಚಳವು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕಾನೂನು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಆದಿತ್ಯ ನಾಥ್ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.

The post ಹೆಚ್ಚು ಮಕ್ಕಳನ್ನು ಹೆತ್ತವರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ಮಿಜೋರಾಂ ಸಚಿವ appeared first on News First Kannada.

Source: newsfirstlive.com

Source link